ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗಾಗಿ ಬಿಸಿಸಿಐ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಐಪಿಎಲ್ ಹರಾಜಿಗಾಗಿ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಡಿಸೆಂಬರ್ 19 ರಂದು ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಲಾಗಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಇದಕ್ಕಾಗಿ ನವೆಂಬರ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ.
ಮುಂಬರುವ ಐಪಿಎಲ್ ಹರಾಜಿಗಾಗಿ ಪ್ರತಿ ಫ್ರಾಂಚೈಸಿಗಳಿಗೆ 100 ಕೋಟಿಯ ಪರ್ಸ್ ನೀಡಲಾಗುತ್ತಿದೆ. ಕಳೆದ ಬಾರಿಯ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು 95 ಕೋಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ 5 ಕೋಟಿ ರೂ. ಅನ್ನು ಹೆಚ್ಚಿಸಲಾಗಿದ್ದು, ಅದರಂತೆ 100 ಕೋಟಿಯೊಳಗೆ ಆಟಗಾರರನ್ನು ಖರೀದಿಸಬಹುದು.
ಐಪಿಎಲ್ 2023 ರಲ್ಲಿ ಮೆಗಾ ಹರಾಜು ನಡೆದಿದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಹೀಗಾಗಿ ಈ ಬಾರಿ ಫ್ರಾಂಚೈಸಿಗಳಿಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು. ಅಲ್ಲದೆ ಬಿಡುಗಡೆ ಮಾಡಲಾದ ಆಟಗಾರರ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಸಬಹುದು. ಹೀಗಾಗಿಯೇ ಈ ಬಾರಿಯ ಹರಾಜು ಪ್ರಕ್ರಿಯೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.
ಐಪಿಎಲ್ 2024 ರ ಹರಾಜಿನಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಬಾರಿಯ ಐಪಿಎಲ್ನಿಂದ ಹೊರಗುಳಿದಿದ್ದ ಪ್ಯಾಟ್ ಕಮಿನ್ಸ್, ಕ್ರಿಸ್ ವೋಕ್ಸ್, ಟ್ರಾವಿಸ್ ಹೆಡ್, ಅಲೆಕ್ಸ್ ಹೇಲ್ಸ್, ಸ್ಯಾಮ್ ಬಿಲ್ಲಿಂಗ್ಸ್, ಜೆರಾಲ್ಡ್ ಕೊಯಟ್ಝಿ ಮತ್ತು ಮಿಚೆಲ್ ಸ್ಟಾರ್ಕ್ ಮುಂಬರುವ ಐಪಿಎಲ್ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿದ್ದಾರೆ.
ಮುಂಬರುವ ಐಪಿಎಲ್ನಲ್ಲೂ 10 ತಂಡಗಳೇ ಮುಂದುವರೆಯಲಿದೆ. ಈ ಹಿಂದೆ ತಂಡಗಳ ಸಂಖ್ಯೆಯನ್ನು 12 ಕ್ಕೇರಿಸುವ ಪ್ರಸ್ತಾವನೆಗಳು ಬಂದಿದ್ದರೂ, ಸದ್ಯದ ಮಟ್ಟಿಗೆ ಬಿಸಿಸಿಐ ಹೆಚ್ಚುವರಿ ಟೀಮ್ಗಳನ್ನು ಕಣಕ್ಕಿಳಿಸುವ ಇರಾದೆಯಲ್ಲಿಲ್ಲ. ಹೀಗಾಗಿ ಐಪಿಎಲ್ ಸೀಸನ್ 17 ರಲ್ಲೂ 10 ತಂಡಗಳೇ ಕಣಕ್ಕಿಳಿಯಲಿದೆ.
ಇದನ್ನೂ ಓದಿ: IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?
ಈ ಬಾರಿ ಕೂಡ ವುಮೆಮ್ಸ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಈ ಲೀಗ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಡಿಸೆಂಬರ್ 9 ರಂದು ನಡೆಸಲು ಯೋಜನೆ ರೂಪಿಸಲಾಗಿದೆ. ಇದಾಗ್ಯೂ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯ ಸ್ಥಳವನ್ನು ಅಂತಿಮಗೊಳಿಸಲಾಗಿಲ್ಲ.