ಮಾರ್ಚ್ 27 ರಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ (SRH vs MI) ನಡುವಿನ ಐಪಿಎಲ್ (IPL 2024) ಪಂದ್ಯದ ವೇಳೆ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ವಿಕೆಟ್ ಪತನವನ್ನು ಸಂಭ್ರಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯನ್ನು ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಅಭಿಮಾನಿಗಳು ಸರಿಯಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಪಕ್ಕದ ರಾಜ್ಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಾದರೂ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆಟವನ್ನು ಕೇವಲ ಮನರಂಜನೆಯಾಗಿ ನೋಡದ ಅಭಿಮಾನಿಗಳು ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿರುವುದನ್ನು ಇಡೀ ದೇಶವೇ ಖಂಡಿಸುತ್ತಿದೆ.
ಕೊಲ್ಲಾಪುರದ ಹನ್ಮಂತವಾಡಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮಾರ್ಚ್ 27ರ ಬುಧವಾರದಂದು ರಾತ್ರಿ 10 ಗಂಟೆ ಸುಮಾರಿಗೆ ಬಂಡುಪಂತ್ ಬಾಪುಸೊ ತಿಬಿಲೆ (ಸಾವಿಗೀಡಾಗಿರುವ ವ್ಯಕ್ತಿ), ಸಾಗರ್ ಜಾಂಜಗೆ ಮತ್ತು ಬಲವಂತ ಜಾಂಜಗೆ (ತೀವ್ರವಾಗಿ ಥಳಿಸಿ ಹತ್ಯೆ ಮಾಡಿರುವವರು) ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಹೈದರಾಬಾದ್ ನೀಡಿದ್ದ 277 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಅದ್ಭುತ ಆರಂಭ ನೀಡಿದ್ದರು. ಆದರೆ ಕೆಲವೇ ಎಸೆತಗಳ ಅಂತರದಲ್ಲಿ ಇಬ್ಬರ ವಿಕೆಟ್ ಪತನವಾಯಿತು.
ಅದರಲ್ಲೂ ರೋಹಿತ್ ಶರ್ಮಾ ವಿಕೆಟ್ ಪತನವಾಗಿದ್ದು, ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಆಘಾತವನ್ನುಂಟು ಮಾಡಿತ್ತು. ರೋಹಿತ್ ಔಟಾದುದ್ದನ್ನು ನೋಡಿ ಅಭಿಮಾನಿಗಳು ಕೂಡ ಆಘಾತಕ್ಕೊಳಗಾಗಿದ್ದರು. ಇದು ಸಾಗರ್ ಜಾಂಜಗೆ ಮತ್ತು ಬಲವಂತ ಜಾಂಜಗೆಗೂ ಆಘಾತವನ್ನುಂಟು ಮಾಡಿದೆ. ಆದರೆ ಈ ವೇಳೆ ಅಲ್ಲೇ ಕುಳಿತಿದ್ದ ಸಿಎಸ್ಕೆ ಅಭಿಮಾನಿ ಬಂಡುಪಂತ್ ತಿಬಿಲೆ ರೋಹಿತ್ ಔಟಾಗಿದುದ್ದನ್ನು ಸಂಭ್ರಮಿಸಿದ್ದಾರೆ. ಇದನ್ನು ನೋಡಿದ ಸಾಗರ್ ಝಂಜಗೆ ಮತ್ತು ಬಲವಂತ ಜಾಂಜಗೆ ಕೋಪ ನೆತ್ತಿಗೇರಿದೆ. ಕೂಡಲೇ ಈ ಇಬ್ಬರು ಬಂಡುಪಂತ್ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.
IPL 2024: ಕ್ರೀಡಾಂಗಣದಲ್ಲಿ ಹಾರ್ದಿಕ್ರನ್ನು ನಿಂದಿಸಿದರೆ ಕಠಿಣ ಕ್ರಮ! ಎಂಸಿಎ ಎಚ್ಚರಿಕೆ
ಈ ವಾಗ್ವಾದ ಗಂಭೀರಗೊಂಡಿದೆ. ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ಹೋಗಿದೆ. ಈ ಹೊಡೆದಾಟದಲ್ಲಿ ಮೂವರಿಗೂ ಗಾಯಗಳಾಗಿವೆ. ಆದರೆ ಜಗಳ ಹೆಚ್ಚಾದಂತೆ ಅಲ್ಲೆ ಇದ್ದ ಕಟ್ಟಿಗೆಗಳನ್ನು ಎತ್ತಿಕೊಂಡ ಸಾಗರ್ ಮತ್ತು ಬಲವಂತ, ಬಂಡುಪಂತ್ಗೆ ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಬಂಡುಪಂತ್ ಅವರ ಕಿವಿ ಹಾಗೂ ಮೂಗಿನಲ್ಲಿ ರಕ್ತ ಸುರಿಯಲ್ಲಾರಂಭಿಸಿದೆ.
ಗಂಭೀರವಾಗಿ ಗಾಯಗೊಂಡ ಬಂಡುಪಂತ್ ತಿಬಿಲೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂರು ದಿನಗಳ ಬಳಿಕ ಅವರು ಸಾವನ್ನಪ್ಪಿದ್ದಾರೆ. ತಿಬಿಲೆ ಅವರು ಪತ್ನಿ, ಮೂವರು ಪುತ್ರಿಯರು, ಅಳಿಯ, ಪುತ್ರ, ಮೊಮ್ಮಕ್ಕಳು, ಸಹೋದರ ಸಹೋದರಿಯರನ್ನು ಅಗಲಿದ್ದಾರೆ. ಈ ಪ್ರಕರಣದಲ್ಲಿ ಶಂಕಿತ ಆರೋಪಿಗಳಾದ ಸಾಗರ್ ಜಾಂಜಗೆ ಮತ್ತು ಬಲವಂತ ಜಾಂಜಗೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Sun, 31 March 24