- Kannada News Photo gallery Cricket photos IPL 2024 mohit sharma take three wickets in four overs without a four vs srh
IPL 2024: ಸ್ಫೋಟಕ ದಾಂಡಿಗರೆದುರು ಕಮಾಲ್ ಮಾಡಿದ ಮೋಹಿತ್ ಶರ್ಮಾ..!
IPL 2024: ಈ ಪಂದ್ಯದಲ್ಲಿ ಮೋಹಿತ್ ತಮ್ಮ ನಾಲ್ಕು ಓವರ್ ಸ್ಪೆಲ್ನಲ್ಲಿ ಕೇವಲ 25 ರನ್ ನೀಡಿ 3 ವಿಕೆಟ್ ಪಡೆದರು. ಮೋಹಿತ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
Updated on: Mar 31, 2024 | 7:33 PM

ತವರು ನೆಲದಲ್ಲಿ ನಡೆದ ಐಪಿಎಲ್ 12ನೇ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ತಂಡವನ್ನು ಮಣಿಸಿದ ಗುಜರಾತ್ ಮತ್ತೆ ತನ್ನ ಗೆಲುವಿನ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕೇವಲ 162 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಹೈದರಾಬಾದ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಗುಜರಾತ್ ಬೌಲರ್ಗಳು ಯಶಸ್ವಿಯಾದರು. ಅದರಲ್ಲೂ ಗುಜರಾತ್ ಪರ ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಮೋಹಿತ್ ಶರ್ಮಾ, ಹೈದರಾಬಾದ್ ಬ್ಯಾಟರ್ಗಳಿಗೆ ಚಳ್ಳೆ ಹಣ್ಣು ತಿನಿಸಿದರು.

ವಾಸ್ತವವಾಗಿ ಗುಜರಾತ್ ಟೈಟಾನ್ಸ್ ತಂಡದ ಅನುಭವಿ ಬೌಲರ್ಗಳಲ್ಲಿ ಒಬ್ಬರಾಗಿರುವ ಮೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ನಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ ಮೋಹಿತ್ ತಮ್ಮ ನಿಧಾನಗತಿಯ ಎಸೆತದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆಯೊಡ್ಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ ಮೋಹಿತ್ ಇದೇ ರೀತಿ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೋಹಿತ್ ತಮ್ಮ ನಾಲ್ಕು ಓವರ್ ಸ್ಪೆಲ್ನಲ್ಲಿ ಕೇವಲ 25 ರನ್ ನೀಡಿ 3 ವಿಕೆಟ್ ಪಡೆದರು. ಮೋಹಿತ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

ಮೋಹಿತ್ ಶರ್ಮಾ ಮೊದಲ ಓವರ್‌ನಲ್ಲಿ ಕೇವಲ 5 ಸಿಂಗಲ್ಸ್ ನೀಡಿ 1 ವಿಕೆಟ್ ಪಡೆದರು. ಬಳಿಕ ತಮ್ಮ ಎರಡನೇ ಓವರ್‌ನಲ್ಲಿ 7 ರನ್ ಬಿಟ್ಟುಕೊಟ್ಟರು. ಮೂರನೇ ಓವರ್‌ನಲ್ಲಿ ಮೋಹಿತ್ ಸ್ವಲ್ಪ ದುಬಾರಿಯಾಗಿ 1 ಸಿಕ್ಸರ್ ಸೇರಿದಂತೆ ಒಟ್ಟು 10 ರನ್ ನೀಡಿದರು. ಬಳಿಕ ತಮ್ಮ ಕೊನೆಯ ಓವರ್‌ನಲ್ಲಿ ಕೇವಲ 3 ರನ್ಗಳನಷ್ಟೇ ನೀಡಿದರು.

ವಿಶೇಷವೆಂದರೆ ಮೋಹಿತ್ ವಿರುದ್ಧ ಯಾವುದೇ ಹೈದರಾಬಾದ್ ಬ್ಯಾಟ್ಸ್‌ಮನ್ 1 ಬೌಂಡರಿ ಕೂಡ ಬಾರಿಸಲಿಲ್ಲ. ಅಬ್ದುಲ್ ಸಮದ್ ಮಾತ್ರ ಒಂದೇ ಒಂದು ಸಿಕ್ಸರ್ ಬಾರಿಸಿದರು.

ಗುಜರಾತ್ ಬೌಲರ್ಗಳ ಕೌಶಲ್ಯಯುತ ಬೌಲಿಂಗ್ನ ಪ್ರಭಾವ ಹೇಗಿತ್ತೆಂದರೆ, ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 19 ಬೌಂಡರಿ ಹಾಗೂ 18 ಸಿಕ್ಸರ್ ಬಾರಿಸಿದ್ದ ಹೈದರಾಬಾದ್ ಬ್ಯಾಟರ್ಸ್ಗಳು, ಗುಜರಾತ್ ವಿರುದ್ಧ 12 ಬೌಂಡರಿ ಹಾಗೂ 6 ಸಿಕ್ಸರ್ಗಳನಷ್ಟೇ ಸಿಡಿಸಲು ಶಕ್ತರಾದರು.

ಗುಜರಾತ್ ಟೈಟಾನ್ಸ್ ಗೆಲುವಿನಲ್ಲಿ ಮೋಹಿತ್ ಶರ್ಮಾ ಹೊರತಾಗಿ ನೂರ್ ಅಹ್ಮದ್, ರಶೀದ್ ಖಾನ್, ಉಮೇಶ್ ಯಾದವ್ ಮತ್ತು ಅಜ್ಮತುಲ್ಲಾ ಉಮರ್ಜಾಯ್ ಕೂಡ ತಲಾ 1 ವಿಕೆಟ್ ಪಡೆದಿದ್ದಲ್ಲದೆ, ಹೈದರಾಬಾದ್ ಬ್ಯಾಟರ್ಗಳನ್ನು ಬಿಗ್ ಸ್ಕೋರ್ ಮಾಡದಂತೆ ತಡೆದರು.




