IPL 2024: ಮಳೆಯಿಂದ ಫೈನಲ್ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ಟ್ರೋಫಿ ಹಂಚಲಾಗುತ್ತಾ? ಇಲ್ಲಿದೆ ಪೂರ್ಣ ವಿವರ

|

Updated on: May 25, 2024 | 9:49 PM

KKR vs SRH IPL 2024 Final: ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಅದಕ್ಕೆಲ್ಲ ಉತ್ತರವೆಂದರೆ.. ಫೈನಲ್ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಿದರೆ, ಕೆಕೆಆರ್ ತಂಡವನ್ನು ವಿಜೇತ ತಂಡವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಐಪಿಎಲ್ 2024 ರ ಪಾಯಿಂಟ್ ಪಟ್ಟಿಯಲ್ಲಿ ಕೋಲ್ಕತ್ತಾ ಅಗ್ರಸ್ಥಾನದಲ್ಲಿದೆ.

IPL 2024: ಮಳೆಯಿಂದ ಫೈನಲ್ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ಟ್ರೋಫಿ ಹಂಚಲಾಗುತ್ತಾ? ಇಲ್ಲಿದೆ ಪೂರ್ಣ ವಿವರ
ಐಪಿಎಲ್ 2024 ಫೈನಲ್
Follow us on

ಐಪಿಎಲ್ 2024ರ ಫೈನಲ್ (IPL 2024 Final) ಪಂದ್ಯ ಹೈದರಾಬಾದ್ ಮತ್ತು ಕೋಲ್ಕತ್ತಾ (Kolkata Knight Riders vs Sunrisers Hyderabad) ನಡುವೆ ನಡೆಯಲಿದೆ. ಈ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹೆಚ್ಚಿದೆ. ಈ ಪಂದ್ಯ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ (MA Chidambaram Stadium) ನಡೆಯಲಿದೆ. ಆದರೆ ಈ ಹೈವೋಲ್ಟೇಜ್ ಕದನಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ವಾಸ್ತವವಾಗಿ ಈ ಆವೃತ್ತಿಯಲ್ಲಿ ಮೂರು ಪಂದ್ಯಗಳು ಮಳೆಗಾಹುತಿಯಾಗಿದ್ದವು. ಆ ವೇಳೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗಿತ್ತು. ಆದರೀಗ ನಡೆಯುತ್ತಿರುವುದು ಫೈನಲ್ ಪಂದ್ಯ. ಈ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ಟ್ರೋಫಿಯನ್ನು ಸಮನಾಗಿ ಹಂಚಲಾಗುವುದಿಲ್ಲ. ಹಾಗಾದರೆ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಪಂದ್ಯ ರದ್ದಾದರೆ ಟ್ರೋಫಿ ಯಾರಿಗೆ?

ಕ್ವಾಲಿಫೈಯರ್ 1ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಕೋಲ್ಕತ್ತಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಫೈನಲ್ ತಲುಪಿದ ಮೊದಲ ತಂಡವಾಯಿತು. ಇದೀಗ ಹೈದರಾಬಾದ್ ಕೂಡ ಫೈನಲ್ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ಮತ್ತೊಮ್ಮೆ ಹೈದರಾಬಾದ್ ತಂಡವನ್ನು ಎದುರಿಸಬೇಕಾಗಿದೆ. ವಿಶೇಷವೆಂದರೆ ಹೈದರಾಬಾದ್ ವಿರುದ್ಧ ಕೆಕೆಆರ್‌ನ ದಾಖಲೆ ಅತ್ಯುತ್ತಮವಾಗಿದೆ. ಈ ಸೀಸನ್‌ನಲ್ಲಿ ಕೋಲ್ಕತ್ತಾ, ಹೈದರಾಬಾದ್ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ, ಅದರಲ್ಲಿ ಒಂದು ಲೀಗ್ ಪಂದ್ಯವಾಗಿದ್ದರೆ, ಇನ್ನೊಂದು ಪಂದ್ಯವು ಅರ್ಹತಾ ಪಂದ್ಯವಾಗಿತ್ತು. ಈ ಎರಡೂ ಪಂದ್ಯಗಳಲ್ಲಿ ಕೆಕೆಆರ್ ಜಯ ಸಾಧಿಸಿತ್ತು.

IPL 2024: ಟ್ರೋಫಿಯೊಂದಿಗೆ ಬೀಚ್‌ನಲ್ಲಿ ಕಮ್ಮಿನ್ಸ್ ಮತ್ತು ಶ್ರೇಯಸ್ ಫೋಟೋಶೂಟ್

ಇದೀಗ ಫೈನಲ್ ಪಂದ್ಯದಲ್ಲೂ ಹೈದರಾಬಾದ್ ತಂಡವನ್ನು ಮಣಿಸುವ ಇರಾದೆಯಲ್ಲಿ ಕೆಕೆಆರ್ ತಂಡವಿದೆ. ಇತ್ತ ಹೈದರಾಬಾದ್‌ ಕಳೆದೆರಡು ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಈ ಪಂದ್ಯ ಮಳೆಯಿಂದ ರದ್ದಾದರೆ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಅದಕ್ಕೆಲ್ಲ ಉತ್ತರವೆಂದರೆ.. ಫೈನಲ್ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಿದರೆ, ಕೆಕೆಆರ್ ತಂಡವನ್ನು ವಿಜೇತ ತಂಡವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಐಪಿಎಲ್ 2024 ರ ಪಾಯಿಂಟ್ ಪಟ್ಟಿಯಲ್ಲಿ ಕೋಲ್ಕತ್ತಾ ಅಗ್ರಸ್ಥಾನದಲ್ಲಿದೆ.

ಮೀಸಲು ದಿನ ನಿಗದಿ

ಐಪಿಎಲ್ 2024 ರ ಅಂತಿಮ ಪಂದ್ಯದಲ್ಲಿ ಮಳೆ ಬಂದು ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಅದಕ್ಕಾಗಿ ಮೀಸಲು ದಿನವನ್ನು ಇಡಲಾಗಿದೆ. ಮೀಸಲು ದಿನದಂದು ಮಳೆ ಬಂದರೂ ಅಂಪೈರ್ ಹೇಗಾದರೂ ಮಾಡಿ ಪಂದ್ಯವನ್ನು ತಲಾ 5 ಓವರ್‌ಗಳಾಗಿ ಆಡಿಸಲು ಪ್ರಯತ್ನಿಸುತ್ತಾರೆ. 5 ಓವರ್‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ, ಕನಿಷ್ಠ ಸೂಪರ್ ಓವರ್ ನಡೆಸಲು ಪ್ರಯತ್ನಿಸಲಾಗುವುದು. ಆದರೆ ಎರಡೂ ದಿನ ಧಾರಾಕಾರ ಮಳೆ ಸುರಿದು ಪಂದ್ಯವನ್ನು ರದ್ದುಗೊಳಿಸಿದರೆ, ಈ ಪರಿಸ್ಥಿತಿಯಲ್ಲಿ ಕೋಲ್ಕತ್ತಾ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

ಹೀಗಾಗಿ ಕೆಕೆಆರ್ ತಂಡ ಫೈನಲ್ ಆಡದೆ ಟ್ರೋಫಿ ಗೆಲ್ಲುವ ಅವಕಾಶ ಹೊಂದಿದೆ. ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿದ್ದ ಲಾಭ ಕೋಲ್ಕತ್ತಾ ಪಡೆಯಲಿದ್ದು, ಟ್ರೋಫಿ ಗೆಲ್ಲಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಕೆಕೆಆರ್‌ಗೆ ಇದು ಮೂರನೇ ಟ್ರೋಫಿಯಾಗಲಿದೆ. ಇನ್ನು ಹವಾಮಾನದ ಕುರಿತು ಮಾತನಾಡುವುದಾದರೆ, ಮೇ 26 ರಂದು ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಈ ಅವಧಿಯಲ್ಲಿ ಕನಿಷ್ಠ ತಾಪಮಾನ 29 ಡಿಗ್ರಿ, ಗರಿಷ್ಠ ತಾಪಮಾನ 37 ಡಿಗ್ರಿ ಇರುತ್ತದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ