IPL 2024: RCB ಪಂದ್ಯದ ಟಿಕೆಟ್ ಬೆಲೆ 55,055 ರೂ.

| Updated By: ಝಾಹಿರ್ ಯೂಸುಫ್

Updated on: Mar 26, 2024 | 3:52 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಆರ್​ಸಿಬಿ ತಂಡವು ಇದುವರೆಗೆ 2 ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಸಿಎಸ್​ಕೆ ತಂಡದ ವಿರುದ್ಧ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ಗೆಲುವಿನ ಖಾತೆ ತೆರೆದಿದೆ. ಈ ಮೂಲಕ ತವರಿನಲ್ಲಿ ಶುಭಾರಂಭ ಮಾಡಿದೆ.

IPL 2024: RCB ಪಂದ್ಯದ ಟಿಕೆಟ್ ಬೆಲೆ 55,055 ರೂ.
RCB
Follow us on

16 ವರ್ಷಗಳು…ಒಂದೇ ಒಂದು ಕಪ್ ಗೆದ್ದಿಲ್ಲ…ಪ್ರತಿ ಸೀಸನ್​ನಲ್ಲೂ ಲೆಕ್ಕಾಚಾರ…ಕೊನೆಗೆ ನೋವಿನ ವಿದಾಯ…ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸ, ಕಪ್ ಕೈ ತಪ್ಪಿದ್ದರೆ ಮುಂದಿನ ವರ್ಷ ನಮ್ದೆ ಎನ್ನುವ ಭರವಸೆ. ಅಂತಹದೊಂದು ಲಾಯಲ್ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ರಾಯಲ್ ತಂಡ ಯಶಸ್ವಿಯಾಗಿದೆ. ಇದೇ ಕಾರಣದಿಂದಾಗಿ ಆರ್​ಸಿಬಿ ತಂಡದ ಪ್ರತಿ ಪಂದ್ಯಗಳಿಗೂ ಕ್ರೀಡಾಂಗಣ ತುಂಬಿ ತುಳುಕುತ್ತಿರುತ್ತವೆ. ಅತ್ತ ಪ್ರತಿ ಪಂದ್ಯಕ್ಕೂ ಅಭಿಮಾನಿಗಳ ಮಹಾಪೂರವೇ ಹರಿದು ಬರುತ್ತಿರುವುದರಿಂದ ಇತ್ತ ಆರ್​ಸಿಬಿ ಪಂದ್ಯಗಳ ಟಿಕೆಟ್ ಬೆಲೆಗಳು ಗಗನಕ್ಕೇರುತ್ತಿದೆ. ಇದಕ್ಕೆ ಸಾಕ್ಷಿಯೇ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕಂಡು ಬಂದ ಆರ್​ಸಿಬಿ ತಂಡದ ಟಿಕೆಟ್ ಪ್ರೈಸ್.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ನಿರೀಕ್ಷೆಯಂತೆ ತವರಿನಲ್ಲಿ ನಡೆದ ಆರ್​ಸಿಬಿ ತಂಡದ ಮೊದಲ ಪಂದ್ಯಕ್ಕೆ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಇದಾಗ್ಯೂ ವಿಐಪಿ ಸ್ಟ್ಯಾಂಡ್​ನ ಕೆಲ ಸೀಟುಗಳು ಖಾಲಿಯಿದ್ದವು.

ಈ ಆಸನಗಳ ಟಿಕೆಟ್​ ಬೆಲೆ ಬರೋಬ್ಬರಿ 55,055 ರೂ.ಗೆ ಮಾರಾಟವಾಗುತ್ತಿದ್ದವು ಎಂದರೆ ನಂಬಲೇಬೇಕು. RCB-PBKS ನಡುವಣ ಪಂದ್ಯ ಆರಂಭವಾಗುತ್ತಿದ್ದಂತೆ ಪೆವಿಲಿಯನ್ ಟೆರೇಸ್‌ನ ಸ್ವಲ್ಪ ಕೆಳಗಿರುವ ಕತಾರ್ ಏರ್‌ವೇಸ್ ಪಿ2 ಸ್ಟ್ಯಾಂಡ್​ನ ಟಿಕೆಟ್ ಬೆಲೆಗಳು 55,055 ರೂ.ಗೆ ಮುಟ್ಟಿದ್ದವು. ಇದೇ ಟಿಕೆಟ್ ಭಾನುವಾರ 52,938 ರೂ.ಗೆ ಲಭ್ಯವಿದ್ದವು ಎಂಬುದು ಇಲ್ಲಿ ಉಲ್ಲೇಖಾರ್ಹ.

ಆದರೆ ಪಂದ್ಯ ಆರಂಭವಾಗುತ್ತಿದ್ದಂತೆ shop.royalchallengers.com ನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಇದರ ಬೆನಲ್ಲೇ ಟಿಕೆಟ್ ದರಗಳು ಕೂಡ ಏರಿಕೆಯಾಗಿದೆ. ಇದು ಐಪಿಎಲ್ ಲೀಗ್ ಪಂದ್ಯಕ್ಕೆ ನಿಗದಿಯಾದ ಅತ್ಯಂತ ದುಬಾರಿ ಟಿಕೆಟ್ ಎಂಬುದು ವಿಶೇಷ.

RCB ಟಿಕೆಟ್ ದಾಖಲೆ:

ಐಪಿಎಲ್​ನಲ್ಲಿ ಈ ಹಿಂದೆ 42,300 ರೂ.ಗೆ ಟಿಕೆಟ್​ಗಳು ಲಭ್ಯವಿದ್ದವು. ಇದೀಗ 55,055 ರೂ.ಗೆ ಟಿಕೆಟ್​ಗಳನ್ನು ಮಾರಾಟ ಮಾಡುವ ಮೂಲಕ ಆರ್​ಸಿಬಿ ಹೊಸ ಇತಿಹಾಸ ನಿರ್ಮಿಸಿದೆ.  ಇನ್ನು ಇಂತಹ ದುಬಾರಿ ಟಿಕೆಟ್ ಪಡೆದರೆ, ಅದರ ಜೊತೆಗೆ ಅನಿಯಮಿತ ಆಹಾರ ಮತ್ತು ಪಾನೀಯಗಳು ಕೂಡ ಸಿಗುತ್ತವೆ. ಹೀಗಾಗಿಯೇ ಈ ಸ್ಟ್ಯಾಂಡ್​ಗಳ ಟಿಕೆಟ್ ದರಗಳು ದುಬಾರಿಯಾಗಿರುತ್ತದೆ.

SRH ಪಂದ್ಯ ಕೂಡ ದುಬಾರಿ:

ಟಿಕೆಟಿಂಗ್ ಪಾಲುದಾರರ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಕೆಲ ಪಂದ್ಯಗಳ ತನ್ನ ಟಿಕೆಟ್ ದರಗಳನ್ನು 30,000 ರೂ.ಗೆ ಏರಿಸಿದೆ. ಅಂದರೆ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳನ್ನು ವೀಕ್ಷಿಸಲು ಬಯಸಿದರೆ ವಿಐಪಿ ಟಿಕೆಟ್​ಗಳಿಗೆ ದುಬಾರಿ ಮೊತ್ತ ತೆರಬೇಕಾಗುತ್ತದೆ.

ವಿತ್ ಬಿಯರ್ ಟಿಕೆಟ್:

ಅಹಮದಾಬಾದ್‌ನಲ್ಲಿ ಏಪ್ರಿಲ್ 4 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್​ ರೂ. 499 ರಿಂದ ರೂ. 12,000 ಬೆಲೆಯ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ತಂಡದ ದುಬಾರಿ ಟಿಕೆಟ್ ಖರೀದಿಸಿದರೆ ಮದ್ಯ ಕೂಡ ಸಿಗಲಿದೆ.

ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ 5,000 ರೂ.ಗಳ ಟಿಕೆಟ್​ನೊಂದಿಗೆ ವಿತ್ ಬಿಯರ್ ಆಫರ್ ನೀಡಿದೆ. ಹಾಗೆಯೇ ಮತ್ತಷ್ಟು ದುಬಾರಿ ಟಿಕೆಟ್​ಗಳೊಂದಿಗೆ ವಿಐಪಿ ಲಾಂಚ್​ನಲ್ಲಿ ಹಾರ್ಡ್ ಡ್ರಿಂಕ್ಸ್​ ಕೂಡ ಸಿಗಲಿದೆ. ಈ ಮೂಲಕ ಪ್ರತಿ ಕ್ಷಣಗಳನ್ನು ಸಿಪ್​ ಮೂಲಕ ಆನಂದಿಸುವ ಅವಕಾಶವಿದೆ.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ಭರ್ಜರಿ ದಾಖಲೆ ಸೇರ್ಪಡೆ

ಒಟ್ಟಿನಲ್ಲಿ ಆರ್​ಸಿಬಿ ಫ್ರಾಂಚೈಸಿಯು ಲೀಗ್ ಪಂದ್ಯದ ಟಿಕೆಟ್ ಬೆಲೆಯನ್ನು 55 ಸಾವಿರ ರೂ.ಗೆ ಏರಿಸಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ. ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್​ಗೆ ಎಂಟ್ರಿ ಕೊಟ್ಟರೆ ಈ ದರ ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.