
ಐಪಿಎಲ್ (IPL 2024) 10ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಕೆಕೆಆರ್ ಕೋಚ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಗೆ ಪ್ರತಿಷ್ಠೆಯ ಕಣವಾಗಿದ್ದರೆ, ಇನ್ನೊಂದೆಡೆ ರಿಂಕು ಸಿಂಗ್ (Rinku Singh) ಮತ್ತು ಯಶ್ ದಯಾಳ್ (Yash Dayal) ನಡುವಿನ ಹಳೆಯ ಸೇಡಿಗೆ ಪ್ರತಿಕಾರದ ಪಂದ್ಯವಾಗಿದೆ. ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ನಡೆದ ಕೆಕೆಆರ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್, ಅಂದು ಗುಜರಾತ್ ಪರ ಆಡುತ್ತಿದ್ದ ಯಶ್ ದಯಾಲ್ ಬೌಲಿಂಗ್ನಲ್ಲಿ ಸತತ ಐದು ಸಿಕ್ಸರ್ಗಳನ್ನು ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದಲ್ಲದೆ, ಒಂದೇ ಒಂದು ರಾತ್ರಿಯಲ್ಲಿ ಕ್ರಿಕೆಟ್ ಲೋಕದ ಮನೆಮಾತಾಗಿದ್ದರು. ಈ ಪಂದ್ಯದ ನಂತರವೇ ರಿಂಕು ಸಿಂಗ್ಗೆ ಟೀಂ ಇಂಡಿಯಾದ ಕದ ತೆರೆದಿತ್ತು. ಇದರ ತದ್ವಿರುದ್ಧವಾಗಿ ಯಶ್ ದಯಾಳ್ ಕ್ರಿಕೆಟ್ ವೃತ್ತಿಜೀವನವೇ ಸಂಕಷ್ಟಕ್ಕೆ ಸಿಲುಕಿತ್ತು.
ಆದರೀಗ ಆ ಹಳೆಯ ಸೇಡಿಗೆ ಪ್ರತಿಕಾರ ತೀರಿಸಿಕೊಳ್ಳುವ ಅವಕಾಶ ರಿಂಕು ಸಿಂಗ್ಗೆ ಒದಗಿಬಂದಿದೆ. ಇಂದಿನ ಪಂದ್ಯದಲ್ಲಿ ರಿಂಕು ಸಿಂಗ್ ಹಾಗೂ ಯಶ್ ದಯಾಳ್ ಮುಖಾಮುಖಿಯಾಗುತ್ತಿದ್ದಾರೆ. ಹೀಗಾಗಿ ಇವರಿಬ್ಬರ ನಡುವಿನ ಹಣಾಹಣಿಯನ್ನು ನೋಡಲು ಕ್ರೀಡಾ ಪ್ರೇಮಿಗಳು ಕಾತರರಾಗಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ರಿಂಕು ಸಿಂಗ್, ಮತ್ತೊಮ್ಮೆ ಯಶ್ ದಯಾಳ್ ಮೇಲೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಾರೋ ಅಥವಾ ಯಶ್ ದಯಾಳ್, ರಿಂಕುರನ್ನು ಕಟ್ಟಿಹಾಕುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಆ ಐದು ಸಿಕ್ಸರ್ಗಳ ಕಹಿ ಘಟನೆಯನ್ನು ನೆನೆದಿರುವ ಯಶ್, ಆ ಪಂದ್ಯದ ನಂತರ ಏನಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
IPL 2024: ಆಡಿರುವ 9 ಪಂದ್ಯಗಳಲ್ಲಿ ಮಿಂಚಿದ ಭಾರತದ ಅನ್‌ಕ್ಯಾಪ್ಡ್ ಆಟಗಾರರು
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಯಶ್ ದಯಾಳ್ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ ಸಿರಾಜ್, ಯಶ್ ಬಳಿ ಆ ಐದು ಸಿಕ್ಸರ್ಗಳ ಬಗ್ಗೆ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಯಶ್ ದಯಾಳ್, ‘ಇಂದಿಗೂ ಆ ವಿಷಯ ನನ್ನನ್ನು ಕಾಡುತ್ತಿದೆ. ಆ ಪಂದ್ಯದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಸ್ಟ್ ನೋಡಿ ಬೇಸರವಾಯಿತು. ನಾನು ಅದನ್ನೇ ಯೋಚಿಸುತ್ತಾ ಚಿಂತೆಗೊಳಗಾಗಿದ್ದೆ ಎಂದಿದ್ದಾರೆ.
2023 ರ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕೊನೆಯ ಓವರ್ನಲ್ಲಿ 28 ರನ್ ಬೇಕಿತ್ತು. ಈ ವೇಳೆ ಯಶ್ ದಯಾಳ್ ಕೊನೆಯ ಓವರ್ ಬೌಲಿಂಗ್ ಮಾಡುವ ಜವಬ್ದಾರಿ ಹೊತ್ತಿದ್ದರು. ಸ್ಟ್ರೈಕ್ನಲ್ಲಿದ್ದ ಉಮೇಶ್ ಯಾದವ್ ಸಿಂಗಲ ರನ್ ತೆಗೆದುಕೊಂಡು ರಿಂಕು ಸಿಂಗ್ಗೆ ಸ್ಟ್ರೈಕ್ ನೀಡಿದರು. ನಂತರ ರಿಂಕು ಸಿಂಗ್ ಐದು ಎಸೆತಗಳಲ್ಲಿ ಐದು ಸಿಕ್ಸರ್ ಬಾರಿಸಿ ಕೆಕೆಆರ್ ಗೆಲುವಿಗೆ ಕಾರಣರಾಗಿದ್ದರು.
History created by Rinku Singh.
What a finish. pic.twitter.com/NDAiGjQVoI
— Johns. (@CricCrazyJohns) April 9, 2023
ಆ ಪಂದ್ಯದ ನಂತರ ಗುಜರಾತ್ ತಂಡದಿಂದ ಹೊರಬಿದ್ದಿದ್ದ ಯಶ್ ದಯಾಳ್ರನ್ನು 2024 ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಆ ನಂತರ ನಡೆದ ಹರಾಜಿನಲ್ಲಿ ಆರ್ಸಿಬಿ ದಯಾಳ್ಗೆ 5 ಕೋಟಿ ನೀಡಿ ಖರೀದಿಸಿತ್ತು. ಇಲ್ಲಿಯವರೆಗೆ ಅದ್ಭುತ ಬೌಲಿಂಗ್ ಮಾಡುವ ಮೂಲಕ ಆರ್ಸಿಬಿ ಫ್ರಾಂಚೈಸಿಯ ನಂಬಿಕೆ ಉಳಿಸಿಕೊಂಡಿರುವ ಯಶ್ ಇಂದಿನ ಪಂದ್ಯದಲ್ಲಿ ಏನು ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Fri, 29 March 24