IPL 2024: KKR vs SRH ನಡುವೆ ಫೈನಲ್ ಫೈಟ್

IPL 2024: ಈ ಬಾರಿಯ ಐಪಿಎಲ್​ನ ಲೀಗ್ ಹಂತದ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ ತಂಡಗಳೇ ಇದೀಗ ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಅದರಂತೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಲಿದೆ.

IPL 2024: KKR vs SRH ನಡುವೆ ಫೈನಲ್ ಫೈಟ್
KKR vs SRH
Follow us
ಝಾಹಿರ್ ಯೂಸುಫ್
|

Updated on: May 25, 2024 | 7:01 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)​ ಸೀಸನ್ 17ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಮೇ 21 ರಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡವನ್ನು ಮಣಿಸಿ ಕೆಕೆಆರ್​ ಫೈನಲ್​ ಪ್ರವೇಶಿಸಿತ್ತು. ಇನ್ನು ಮೇ 22 ರಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿ ರಾಜಸ್ಥಾನ್ ರಾಯಲ್ಸ್ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿತ್ತು.

ಅದರಂತೆ ಶುಕ್ರವಾರ (ಮೇ 24) ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಕೇವಲ 120 ರನ್​ಗಳಿಗೆ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್ ಹಾಗೂ ರಾಹುಲ್ ತ್ರಿಪಾಠಿ ವಿಕೆಟ್ ಕಳೆದುಕೊಂಡು ಎಸ್ಆರ್​ಹೆಚ್ ತಂಡ ಸಂಕಷ್ಟಕ್ಕೆ ಸಿಲುಕಿತು.  ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಹೆನ್ರಿಕ್ ಕ್ಲಾಸೆನ್ (50) ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.

176 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ (42) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆ ಬಳಿಕ ದಾಳಿಗಿಳಿದ ಸ್ಪಿನ್ನರ್​ಗಳಾದ ಶಹಬಾಝ್ ಅಹ್ಮದ್ ಹಾಗೂ ಅಭಿಷೇಕ್ ಶರ್ಮಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

4 ಓವರ್​ಗಳಲ್ಲಿ ಕೇವಲ 23 ರನ್ ನೀಡಿದ ಶಹಬಾಝ್ ಅಹ್ಮದ್ 3 ವಿಕೆಟ್ ಕಬಳಿಸಿದರೆ, ಅಭಿಷೇಕ್ ಶರ್ಮಾ 4 ಓವರ್​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ 4 ಓವರ್​ಗಳಲ್ಲಿ 73 ರನ್ ಗಳಿಸಬೇಕಿತ್ತು.

ಈ ಹಂತದಲ್ಲಿ ಯುವ ದಾಂಡಿಗ ಧ್ರುವ್ ಜುರೇಲ್ (56) ಬಿರುಸಿನ ಅರ್ಧಶತಕ ಪೂರೈಸಿದರು. ಆದರೆ ಮತ್ತೊಂದು ತುದಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್​ಗಳಿಸಿ ರಾಜಸ್ಥಾನ್ ರಾಯಲ್ಸ್ 36 ರನ್​ಗಳಿಂದ  ಸೋಲೊಪ್ಪಿಕೊಂಡಿದೆ.

ಈ ಗೆಲುವಿನೊಂಧಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಅದರಂತೆ ಮೇ 26 ರಂದು ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಫೈಟ್​ನಲ್ಲಿ ಕೆಕೆಆರ್ ಮತ್ತು ಎಸ್ಆರ್​ಹೆಚ್ ತಂಡಗಳು ಮುಖಾಮುಖಿಯಾಗಲಿದೆ.

ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಅಭಿಷೇಕ್ ಶರ್ಮಾ , ರಾಹುಲ್ ತ್ರಿಪಾಠಿ , ನಿತೀಶ್ ರೆಡ್ಡಿ , ಐಡೆನ್ ಮಾರ್ಕ್ರಾಮ್ , ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್) , ಅಬ್ದುಲ್ ಸಮದ್ , ಪ್ಯಾಟ್ ಕಮಿನ್ಸ್ (ನಾಯಕ) , ಭುವನೇಶ್ವರ್ ಕುಮಾರ್ , ಜಯದೇವ್ ಉನದ್ಕತ್ , ಟಿ ನಟರಾಜನ್, ಶಹಬಾಝ್ ಅಹ್ಮದ್ (ಇಂಪ್ಯಾಕ್ಟ್ ಪ್ಲೇಯರ್).

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ RCB ತಂಡವನ್ನು ತೊರೆಯಲು ಇದು ಸಕಾಲ: ಕೆವಿನ್ ಪೀಟರ್ಸನ್

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಟಾಮ್ ಕೊಹ್ಲರ್-ಕ್ಯಾಡ್ಮೋರ್ , ಸಂಜು ಸ್ಯಾಮ್ಸನ್ (ನಾಯಕ) , ರಿಯಾನ್ ಪರಾಗ್ , ಧ್ರುವ್ ಜುರೆಲ್ , ರೋವ್​ಮನ್ ಪೊವೆಲ್ , ರವಿಚಂದ್ರನ್ ಅಶ್ವಿನ್ , ಟ್ರೆಂಟ್ ಬೌಲ್ಟ್ , ಅವೇಶ್ ಖಾನ್ , ಸಂದೀಪ್ ಶರ್ಮಾ , ಯುಜ್ವೇಂದ್ರ ಚಹಲ್, ಶಿಮ್ರಾನ್ ಹೆಟ್ಮೆಯರ್ (ಇಂಪ್ಯಾಕ್ಟ್ ಪ್ಲೇಯರ್).