IPL 2024: ರಣರೋಚಕ ಹೋರಾಟದಲ್ಲಿ ಸನ್​ರೈಸರ್ಸ್ ಹೈದರಾಬಾದ್​​ಗೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Apr 09, 2024 | 11:30 PM

IPL 2024: ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 37 ಎಸೆತಗಳನ್ನು ಎದುರಿಸಿದ ನಿತೀಶ್ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 64 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್​ ಕಲೆಹಾಕಿತು.

IPL 2024: ರಣರೋಚಕ ಹೋರಾಟದಲ್ಲಿ ಸನ್​ರೈಸರ್ಸ್ ಹೈದರಾಬಾದ್​​ಗೆ ರೋಚಕ ಜಯ
SRH
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಜಯ ಸಾಧಿಸಿದೆ. ಚಂಡೀಗಢದ ಮಹಾರಾಜ ಯದವೀಂದ್ರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾದ ಟ್ರಾವಿಸ್ ಹೆಡ್ (21) ಹಾಗೂ ಅಭಿಷೇಕ್ ಶರ್ಮಾ (16) ಬೇಗನೆ ಔಟಾದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಐಡೆನ್ ಮಾರ್ಕ್ರಾಮ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 37 ಎಸೆತಗಳನ್ನು ಎದುರಿಸಿದ ನಿತೀಶ್ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 64 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್​ ಕಲೆಹಾಕಿತು.

183 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಜಾನಿ ಬೈರ್​ಸ್ಟೋವ್ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಪ್ರಭ್​ಸಿಮ್ರಾನ್ ಸಿಂಗ್ (4) ಕೂಡ ಬೇಗನೆ ನಿರ್ಗಮಿಸಿದರು. ಇನ್ನು ನಾಯಕ ಶಿಖರ್ ಧವನ್ 14 ರನ್​ ಬಾರಿಸಿ ಪೆವಿಲಿಯನ್​ಗೆ ಹಿಂತಿರುಗಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್ ಕರನ್ (29), ಸಿಕಂದರ್ ರಾಝ (28) ಉತ್ತಮ ಕೊಡುಗೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ ಪಂದ್ಯವನ್ನು ರಣರೋಚಕಘಟ್ಟದತ್ತ ಕೊಂಡೊಯ್ದರು.

ಕೊನೆಯ ಓವರ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡ 29 ರನ್​ಗಳ ಗುರಿ ಪಡೆದಿತ್ತು. ಜಯದೇವ್ ಉನಾದ್ಕಟ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲೇ ಅಶುತೋಷ್ ಸಿಕ್ಸ್ ಬಾರಿಸಿದರು. ಇದಾದ ಬಳಿಕ 2 ವೈಡ್ ಮೂಡಿಬಂತು. ಇನ್ನು 2ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು.

3ನೇ ಮತ್ತು 4ನೇ ಎಸೆತಗಳಲ್ಲಿ ಎರಡೆರಡು ರನ್ ಓಡಿದರು. ಮತ್ತೊಂದು ವೈಡ್. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ 9 ರನ್ ಬೇಕಿದ್ದಾಗ ಶಶಾಂಕ್ ಸಿಂಗ್ ಸಿಕ್ಸ್ ಸಿಡಿಸಿದರು. ಈ ಸಿಕ್ಸ್​ನ ಹೊರತಾಗಿಯೂ ಸನ್​ರೈಸರ್ಸ್ ಹೈದರಾಬಾದ್ ತಂಡವು 2 ರನ್​ಗಳ ರೋಚಕ ಜಯ ಸಾಧಿಸಿತು.

ಈ ರೋಚಕ ಪೈಪೋಟಿಯಲ್ಲಿ ವಿರೋಚಿತ ಹೋರಾಟ ಪ್ರದರ್ಶಿಸಿದ ಶಶಾಂಕ್ ಸಿಂಗ್ 25 ಎಸೆತಗಳಲ್ಲಿ 1 ಸಿಕ್ಸ್, 6 ಫೋರ್​ಗಳೊಂದಿಗೆ ಅಜೇಯ 46 ರನ್ ಬಾರಿಸಿದರೆ, ಅಶುತೋಷ್ ಶರ್ಮಾ 15 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 33 ರನ್ ಸಿಡಿಸಿ ಮಿಂಚಿದರು.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭ್​ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಸಿಕಂದರ್ ರಾಝ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಕಗಿಸೊ ರಬಾಡ.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಝ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕಟ್, ಟಿ ನಟರಾಜನ್.

 

Published On - 11:27 pm, Tue, 9 April 24