IPL 2024: ಕಿಂಗ್ ಕೊಹ್ಲಿಗೆ ಜೀವದಾನ ನೀಡಿ ಕೆಟ್ಟ ಪಂಜಾಬ್! ಆರ್​ಸಿಬಿಗೆ ಮೊದಲ ಜಯ

|

Updated on: Mar 26, 2024 | 12:15 AM

IPL 2024: ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಗೆಲುವಿನ ಖಾತೆ ತೆರೆದಿದೆ. ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಫಾಫ್ ಪಡೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

IPL 2024: ಕಿಂಗ್ ಕೊಹ್ಲಿಗೆ ಜೀವದಾನ ನೀಡಿ ಕೆಟ್ಟ ಪಂಜಾಬ್! ಆರ್​ಸಿಬಿಗೆ ಮೊದಲ ಜಯ
ವಿರಾಟ್ ಕೊಹ್ಲಿ
Follow us on

ಐಪಿಎಲ್ 2024ರಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಗೆಲುವಿನ ಖಾತೆ ತೆರೆದಿದೆ. ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು (RCB vs PBKS) 4 ವಿಕೆಟ್‌ಗಳಿಂದ ಸೋಲಿಸಿದ ಫಾಫ್ ಪಡೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 176 ರನ್ ಕಲೆಹಾಕಿತು. ಪ್ರತ್ಯುತ್ತರವಾಗಿ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಬಾರಿಸಿದರೆ, ಅಂತಿಮವಾಗಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಮತ್ತು ಮಹಿಪಾಲ್ ಲ್ಯಾಮ್ರೋರ್ 8 ಎಸೆತಗಳಲ್ಲಿ 17 ರನ್ ಗಳಿಸಿ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು.

ವಿರಾಟ್ ಕೊಹ್ಲಿ ಅರ್ಧಶತಕ

179 ರನ್‌ಗಳಿಗೆ ಉತ್ತರವಾಗಿ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ವೇಗದ ಆರಂಭ ನೀಡಿದರು. ಆದರೆ ಮೊದಲ ಓವರ್​ನಲ್ಲೇ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಆದರೆ ಮೊದಲ ಸ್ಲಿಪ್​ನಲ್ಲಿದ್ದ ಜಾನಿ ಬೈರ್​ಸ್ಟೋವ್ ಕೊಹ್ಲಿ ಕ್ಯಾಚ್ ಬಿಟ್ಟರು. ಇದರ ಲಾಭ ಪಡೆದ ವಿರಾಟ್ ಕೊಹ್ಲಿ ಅದೇ ಓವರ್​ಲ್ಲಿ ನಾಲ್ಕು ಬೌಂಡರಿಗಳನ್ನು ಹೊಡೆದರು. ಆದರೆ ಇನ್ನೊಂದು ಕಡೆಯಿಂದ ವಿಕೆಟ್‌ಗಳು ಬೀಳುತ್ತಲೇ ಇದ್ದವು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಕ್ಯಾಮರೂನ್ ಗ್ರೀನ್ ತಲಾ 3 ರನ್ ಗಳಿಸಿ ರಬಾಡಗೆ ಬಲಿಯಾದರು. ರಜತ್ ಪಾಟಿದಾರ್ 18 ರನ್ ಗಳಿಸಿ ವಿರಾಟ್ ಕೊಹ್ಲಿಗೆ ಬೆಂಬಲ ನೀಡಿದರು. ಆದರೆ ಅವರಿಗೂ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಇದೇ ವೇಳೆ ವಿರಾಟ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 18 ರನ್ ಗಳಿಸಿದ್ದ ಪಾಟಿದಾರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹರ್‌ಪ್ರೀತ್ ಬ್ರಾರ್ ಔಟ್ ಮಾಡಿದರು. ಮ್ಯಾಕ್ಸ್‌ವೆಲ್‌ ಬ್ಯಾಟ್‌ನಿಂದ ಕೇವಲ 3 ರನ್‌ಗಳು ಬಂದವು.

ಇದರ ನಂತರ ವಿರಾಟ್ ವೇಗವಾಗಿ ರನ್ ಗಳಿಸಿದರು ಆದರೆ ಅವರಿಗೆ ಬೆಂಬಲ ಸಿಗಲಿಲ್ಲ. ಅನುಜ್ ರಾವತ್ ಕೂಡ ರನ್ ಗಳಿಸಲು ಕಷ್ಟಪಡುತ್ತಿದ್ದರು. ಅಂತಿಮವಾಗಿ ವಿರಾಟ್ ಕೊಹ್ಲಿ 16ನೇ ಓವರ್​ನ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್​ಗೆ ಬಲಿಯಾದರು. ತಮ್ಮ ಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ವಿರಾಟ್ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದರು. ಆ ನಂತರ ಕೇವಲ ಎರಡು ಎಸೆತಗಳ ಬಳಿಕ ಅನುಜ್ ರಾವತ್ ಕೂಡ ಔಟಾದರು. ಆಗ ಆರ್‌ಸಿಬಿಗೆ 22 ಎಸೆತಗಳಲ್ಲಿ 49 ರನ್‌ಗಳ ಅಗತ್ಯವಿತ್ತು.

IPL 2024: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಮೊದಲ ಭಾರತೀಯ ನಮ್ಮ ಕಿಂಗ್ ಕೊಹ್ಲಿ..!

ಗೆಲುವಿನ ಹೀರೋ ಕಾರ್ತಿಕ್

ಅನುಜ್ ಔಟಾದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬ್ಯಾಟಿಂಗ್​ಗೆ ಬಂದ ಮಹಿಪಾಲ್ ಲ್ಯಾಮ್ರೋರ್ ಬಂದ ತಕ್ಷಣ ಸ್ಯಾಮ್ ಕರ್ರನ್​ಗೆ ಬೌಂಡರಿ ಬಾರಿಸಿದರು. ಅದೇ ಓವರ್​ನಲ್ಲಿ ಕಾರ್ತಿಕ್ ಮತ್ತೊಂದು ಬೌಂಡರಿ ಬಾರಿಸಿದರು. ನಂತರ 18ನೇ ಓವರ್‌ನಲ್ಲಿ ಅರ್ಷದೀಪ್‌ಗೆ ಲಾಮ್ರೋರ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ 13 ರನ್‌ಗಳು ಬಂದವು. ಅಂತಿಮವಾಗಿ ಎರಡು ಓವರ್‌ಗಳಲ್ಲಿ ಆರ್​ಸಿಬಿ ಗೆಲುವಿಗೆ 23 ರನ್‌ಗಳ ಅಗತ್ಯವಿತ್ತು. ಹರ್ಷಲ್ ಪಟೇಲ್‌ ಬೌಲ್ ಮಾಡಿದ 19ನೇ ಓವರ್‌ನಲ್ಲಿ ಕಾರ್ತಿಕ್ ಮತ್ತು ಲ್ಯಾಮ್ರೋರ್ ಎರಡು ಬೌಂಡರಿಗಳ ಸಹಾಯದಿಂದ 13 ರನ್ ಕಲೆಹಾಕಿದರು. ಈಗ ಕೊನೆಯ ಓವರ್‌ನಲ್ಲಿ 10 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್​​ನಲ್ಲಿದ್ದ ಕಾರ್ತಿಕ್ ಕೇವಲ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಬ್ಬರ ನಡುವೆ 18 ಎಸೆತಗಳಲ್ಲಿ 48 ರನ್‌ಗಳ ಜೊತೆಯಾಟವಿತ್ತು.

ಧವನ್ ಏಕಾಂಗಿ ಹೋರಾಟ

ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಪರ ನಾಯಕ ಶಿಖರ್ ಧವನ್ ಮತ್ತು ಜಿತೇಶ್ ಶರ್ಮಾ ಉಪಯುಕ್ತ ಇನ್ನಿಂಗ್ಸ್ ಆಡಿದ್ದರು. ಧವನ್ 37 ಎಸೆತಗಳಲ್ಲಿ 45 ರನ್ ಗಳಿಸಿದರೆ, ಜಿತೇಶ್ 20 ಎಸೆತಗಳಲ್ಲಿ 27 ರನ್ ಗಳಿಸಿದರು. ಅಂತಿಮವಾಗಿ ಶಶಾಂಕ್ ಸಿಂಗ್ 8 ಎಸೆತಗಳಲ್ಲಿ 21 ರನ್ ಗಳಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್​ಗೆ ಉತ್ತಮ ಆರಂಭ ಸಿಗಲಿಲ್ಲ. 17 ರನ್‌ಗಳಿಗೆ ತಂಡದ ಮೊದಲ ವಿಕೆಟ್ ಕಳೆದುಕೊಂಡ ನಂತರ ಧವನ್ ಮತ್ತು ಪ್ರಭಾಸಿಮ್ರಾನ್ 38 ಎಸೆತಗಳಲ್ಲಿ 55 ರನ್ ಸೇರಿಸಿದರು. ಆದರೆ ಈ ಅಪಾಯಕಾರಿ ಜೊತೆಯಾಟವನ್ನು ಮ್ಯಾಕ್ಸ್‌ವೆಲ್ ಮುರಿದರು. 12ನೇ ಓವರ್‌ನಲ್ಲಿ ಅಲ್ಜಾರಿ ಜೋಸೆಫ್, ಲಿಯಾಮ್ ಲಿವಿಂಗ್‌ಸ್ಟೋನ್‌ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ಮುಂದಿನ ಎಸೆತದಲ್ಲಿ ಧವನ್ ವಿಕೆಟ್ ರೂಪದಲ್ಲಿ ಪಂಜಾಬ್​ಗೆ ದೊಡ್ಡ ಪೆಟ್ಟು ಬಿದ್ದಿತು. ಈ ವೇಳೆ ಪಂಜಾಬ್ ಸ್ಕೋರ್ 12.1 ಓವರ್​ಗಳಲ್ಲಿ ನಾಲ್ಕು ವಿಕೆಟ್​ಗೆ 98 ರನ್ ಆಗಿತ್ತು. ಇದಾದ ಬಳಿಕ ಜಿತೇಶ್ ಸತತ ಎರಡು ಸಿಕ್ಸರ್​ಗಳನ್ನು ಬಾರಿಸಿದಲ್ಲದೆ, ಸ್ಯಾಮ್ ಕರ್ರನ್ ಅವರೊಂದಿಗೆ ಐದನೇ ವಿಕೆಟ್‌ಗೆ 34 ಎಸೆತಗಳಲ್ಲಿ 52 ರನ್ ಸೇರಿಸಿದರು ಮತ್ತು ತಂಡವನ್ನು 150 ರನ್‌ಗಳ ಗಡಿ ದಾಟಿಸಿದರು. ಜೋಸೆಫ್ ಅವರ ಕೊನೆಯ ಓವರ್‌ನಲ್ಲಿ ಶಶಾಂಕ್ ಸಿಂಗ್ 20 ರನ್ ಬಾರಿಸಿ ತಂಡವನ್ನು 170 ರನ್​ಗಳ ಗಡಿ ದಾಟಿಸಿದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:12 am, Tue, 26 March 24