
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರುತುರಾಜ್ ಗಾಯಕ್ವಾಡ್ ಸಿಎಸ್ಕೆ ತಂಡದ ನಾಯಕನಾಗಿ ಶುಭಾರಂಭ ಮಾಡಿದ್ದಾರೆ. ಅಂದರೆ ಈ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ಧೋನಿ ತಮ್ಮ ನಾಯಕತ್ವವನ್ನು ಯುವ ಆಟಗಾರ ರುತುರಾಜ್ಗೆ ಹಸ್ತಾಂತರಿಸಿದ್ದರು.
ಇದೀಗ ಸಿಎಸ್ಕೆ ತಂಡದಲ್ಲಿ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ದ ಧೋನಿಯ ಜೊತೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಕುಶಲೋಪರಿ ವಿಚಾರಿಸಿದರು.
ಟಾಸ್ ಗೆದ್ದ ಬಳಿಕ ಆರ್ಸಿಬಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ನೇರವಾಗಿ ಧೋನಿ ಬಳಿ ತೆರಳಿ ಹೆಗಲ ಮೇಲೆ ಕೈ ಹಾಕಿ ಅದೇನು ಮಾತನಾಡಿದರು. ಇದೀಗ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವಣ ಫ್ರೆಂಡ್ಶಿಪ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತಿದ್ದು, ಕೆಲವರು ಧೋನಿ ಜೊತೆ ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಗ್ಗೆ ವಿಚಾರಿಸಿರಬಹುದು ಎಂದರೆ, ಮತ್ತೆ ಕೆಲವರು ಆಟಗಾರನಾಗಿ ಕಣಕ್ಕಿಳಿದ ಸಿಎಸ್ಕೆ ತಂಡದ ಮಾಜಿ ನಾಯಕನಿಗೆ ವಿರಾಟ್ ಕೊಹ್ಲಿ ಶುಭ ಹಾರೈಸಿರಬಹುದು ಎಂದಿದ್ದಾರೆ.
ಒಟ್ಟಿನಲ್ಲಿ ಮಹೀರಾಟ್ (ಮಹೇಂದ್ರ-ವಿರಾಟ್) ಜುಗಲ್ಬಂಧಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು, ಇಬ್ಬರು ಮಾಜಿ ನಾಯಕರುಗಳ ಗೆಳೆತನದ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
174 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿ ನಿರಾಯಾಸವಾಗಿ ಗೆಲುವು ದಾಖಲಿಸಿತು. ಈ ಜಯದೊಂದಿಗೆ ತವರಿನಲ್ಲಿ ಆರ್ಸಿಬಿ ವಿರುದ್ಧದ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಇದನ್ನೂ ಓದಿ: Virat Kohli: RCB ಸೋತರೂ, 2 ಭರ್ಜರಿ ದಾಖಲೆ ಬರೆದ ಕಿಂಗ್ ಕೊಹ್ಲಿ
ಅಂದರೆ ಆರ್ಸಿಬಿ ತಂಡವು ಚೆನ್ನೈನಲ್ಲಿ ಗೆಲುವು ದಾಖಲಿಸಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ. 2008 ರಲ್ಲಿ ಮೊದಲ ಜಯ ಸಾಧಿಸಿದ ಬಳಿಕ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್ಕೆ ತಂಡವನ್ನು ಸೋಲಿಸಲು ಆರ್ಸಿಬಿ ತಂಡಕ್ಕೆ ಸಾಧ್ಯವಾಗಿಲ್ಲ.
Published On - 7:57 am, Sat, 23 March 24