
ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯದೊಂದಿಗೆ ಶುರುವಾಗುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳ ಟ್ರೋಫಿ ಗೆಲ್ಲುವ ಕನಸು ಇದೀಗ 18ನೇ ಸೀಸನ್ ಅಂತ್ಯಕ್ಕೆ ಬಂದು ನಿಂತಿದೆ. ಅದರಂತೆ ಆರ್‌ಸಿಬಿ ತಂಡವು ಫೈನಲ್ಗೇರಲು ಇನ್ನು ಒಂದು ಹೆಜ್ಜೆಯಷ್ಟೇ ದೂರದಲ್ಲಿದೆ. ಅಂದರೆ ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದರೆ, ನೇರವಾಗಿ ಫೈನಲ್ಗೇರಲಿದೆ.
ಈ ನಿರ್ಣಾಯಕ ಪಂದ್ಯವನ್ನು ವೀಕ್ಷಿಸಲು ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಆಗಮಿಸಿದ್ದಾರೆ. ಬುಧವಾರ ಮುಂಬೈಗೆ ಬಂದಿಳಿದಿರುವ ಎಬಿಡಿ, ಅಲ್ಲಿಂದ ಚಂಡೀಗಢ್ಗೆ ತೆರಳುವುದಾಗಿ ತಿಳಿಸಿದ್ದಾರೆ. ಅದರಂತೆ ಇಂದು ಮುಲ್ಲನ್ಪುರ್ನಲ್ಲಿ ಜರುಗಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಎಬಿಡಿ ಕಾಣಿಸಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಆರ್‌ಸಿಬಿ ತಂಡ ಕಪ್ ಗೆಲ್ಲುವ ಭರವಸೆಯನ್ನು ಎಬಿಡಿ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಾರಿ ರಾಯಲ್ ಪಡೆ ಫೈನಲ್ಗೇರಿದರೆ ಟ್ರೋಫಿ ಎತ್ತಿ ಹಿಡಿಯಲು ನಾನು ಸಹ ಹಾಜರಿರಲಿದ್ದೇನೆ ಎಂದಿದ್ದರು. ಆದರೆ ಇದೀಗ ಪ್ಲೇಆಫ್ ಪಂದ್ಯಕ್ಕೂ ಮುನ್ನವೇ ಎಬಿಡಿ ಭಾರತಕ್ಕೆ ಆಗಮಿಸಿದ್ದಾರೆ. ಈ ಮೂಲಕ ಈ ಬಾರಿ ಆರ್‌ಸಿಬಿ ತಂಡ ಕಪ್ ಗೆಲ್ಲುವುದು ಖಚಿತ ಎಂಬ ವಿಶ್ವಾಸವನ್ನು ಡಿವಿಲಿಯರ್ಸ್ ವ್ಯಕ್ತಪಡಿಸಿದ್ದಾರೆ.
2008 ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಕಪ್ ಗೆದ್ದಿಲ್ಲ. ಆರ್‌ಸಿಬಿ ತನ್ನ ಇತಿಹಾಸದಲ್ಲಿ ಕ್ರಮವಾಗಿ 2009, 2011 ಮತ್ತು 2016 ರಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಮೂರು ಬಾರಿ ಕೂಡ ಫೈನಲ್ನಲ್ಲಿ ಎಡವಿತ್ತು. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸವಿದೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಆರಂಭಿಸಿದರು. 2011 ರಲ್ಲಿ RCB ಸೇರಿದ್ದ ಎಬಿಡಿ ಸತತ 11 ಸೀಸನ್ಗಳಲ್ಲಿ ತಂಡದ ಭಾಗವಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 157 ಪಂದ್ಯಗಳನ್ನಾಡಿರುವ ಎಬಿಡಿ ಒಟ್ಟು 4522 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: IPL 2025: ಪ್ಲೇಆಫ್ ಪಂದ್ಯಗಳಿಂದ 8 ಆಟಗಾರರು ಔಟ್
ಅಲ್ಲದೆ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. 2021 ರ ಐಪಿಎಲ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿದಾಯ ಹೇಳಿದ ಎಬಿಡಿ ಈಗಲೂ ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿರುವುದು ವಿಶೇಷ.