
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೇ 17 ರಿಂದ ಮತ್ತೆ ಶುರುವಾಗಲಿದೆ. ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಎಲ್ಲಾ ಆಟಗಾರರಿಗೆ ತಂಡವನ್ನು ಕೂಡಿಕೊಳ್ಳುವಂತೆ ಫ್ರಾಂಚೈಸಿಗಳು ಸೂಚಿಸಿದೆ. ಇದಾಗ್ಯೂ ಕೆಲ ವಿದೇಶಿ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇನ್ನು ಕೆಲವು ಆಟಗಾರರು ಕೆಲ ಪಂದ್ಯಗಳಿಗೆ ಮಾತ್ರ ಲಭ್ಯರಿರುವುದಾಗಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಇದೀಗ ಭಾರತೀಯ ಕ್ರಿಕೆಟ್ ಮಂಡಳಿ, ಆಯಾ ಆಟಗಾರರ ಕ್ರಿಕೆಟ್ ಬೋರ್ಡ್ ಜೊತೆ ಮಾತುಕತೆಗೆ ಮುಂದಾಗಿದೆ.
ಇಲ್ಲಿ ಮುಖ್ಯವಾಗಿ ಬಿಸಿಸಿಐ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಜೊತೆ ಚರ್ಚಿಸಿದೆ. ಏಕೆಂದರೆ ಈ ಮೂರು ತಂಡಗಳ ಆಟಗಾರರು ಮೇ 25 ರ ಬಳಿಕ ತವರಿಗೆ ಮರಳುವ ಸಾಧ್ಯತೆಯಿದೆ. ಹೀಗಾಗಿ ಈ ಆಟಗಾರರಿಗೆ ಐಪಿಎಲ್ನಲ್ಲಿ ಆಡಲು ಅನುವು ಮಾಡಿಕೊಡುವಂತೆ ಬಿಸಿಸಿಐ, ವಿದೇಶಿ ಕ್ರಿಕೆಟ್ ಬೋರ್ಡ್ಗಳಿಗೆ ಮನವಿ ಮಾಡಿದೆ.
ಆರ್ಸಿಬಿ ತಂಡಲ್ಲಿರುವ ಇಂಗ್ಲೆಂಡ್ ಆಟಗಾರ ಜೇಕಬ್ ಬೆಥೆಲ್ ಹಾಗೂ ವೆಸ್ಟ್ ಇಂಡೀಸ್ನ ರೊಮಾರಿಯೊ ಶೆಫರ್ಡ್ ಮೇ 25 ರ ಬಳಿಕ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಏಕೆಂದರೆ ಮೇ 29 ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಶುರುವಾಗುತ್ತಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶೆಫರ್ಡ್ ಹಾಗೂ ಬೆಥೆಲ್ ಅರ್ಧದಲ್ಲೇ ಟೂರ್ನಿ ತೊರೆಯುವ ಸಾಧ್ಯತೆಯಿದೆ.
ಇತ್ತ ಆರ್ಸಿಬಿ ತಂಡದಲ್ಲಿರುವ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಕೂಡ ಮೇ 26 ರಂದು ತವರಿಗೆ ಮರಳುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಸಜ್ಜಾಗಬೇಕಿದ್ದು, ಹೀಗಾಗಿ ಅದಕ್ಕೂ ಮುನ್ನ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕೆಂದು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಸೂಚಿಸಿದೆ. ಹೀಗಾಗಿ ಲುಂಗಿ ಎನ್ಗಿಡಿ ಕುಡ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎನ್ನಲಾಗಿದೆ.
ಇದೀಗ ಬಿಸಿಸಿಐ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗಳ ಜೊತೆ ಮಾತುಕತೆ ನಡೆಸಿದ್ದು, ಈ ಮಾತುಕತೆ ಫಲಪ್ರದವಾದರೆ ಆರ್ಸಿಬಿ ತಂಡದ ಮೂವರು ಆಟಗಾರರು ಟೂರ್ನಿಯ ಅಂತ್ಯದವರೆಗೆ ಕಾಣಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೆ ಪ್ಲೇಆಫ್ ಪಂದ್ಯಗಳಿಗೆ ಜೇಕಬ್ ಬೆಥೆಲ್, ರೊಮಾರಿಯೊ ಶೆಫರ್ಡ್ ಹಾಗೂ ಲುಂಗಿ ಎನ್ಗಿಡಿ ಅಲಭ್ಯರಾಗುವುದು ಖಚಿತ.
ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಇಂಗ್ಲೆಂಡ್ ಆಟಗಾರ ವಿಲ್ ಜಾಕ್ಸ್ ಕೂಡ ಮೇ 25ರ ಬಳಿಕ ತವರಿಗೆ ಹಿಂತಿರುಗುವ ಸಾಧ್ಯತೆಯಿದೆ. ಏಕೆಂದರೆ ಜಾಕ್ಸ್ ಕೂಡ ವಿಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಸೌತ್ ಆಫ್ರಿಕಾ ಟೆಸ್ಟ್ ತಂಡದ ಭಾಗವಾಗಿರುವ ಕಾರ್ಬಿನ್ ಬಾಷ್ ಹಾಗೂ ರಯಾನ್ ರಿಕೆಲ್ಟನ್ ಕೂಡ ಮೇ 26 ರಂದು ಐಪಿಎಲ್ ತೊರೆಯುವ ಸಾಧ್ಯತೆಯಿದೆ.
ಅತ್ತ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಮಾರ್ಕೊ ಯಾನ್ಸೆನ್ ಹಾಗೂ ಗುಜರಾತ್ ಟೈಟಾನ್ಸ್ ವೇಗಿ ಕಗಿಸೊ ರಬಾಡ ಕೂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಸೌತ್ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರು ಕೂಡ ಅರ್ಧದಲ್ಲೇ ಟೂರ್ನಿ ತೊರೆಯಲಿದ್ದಾರೆ.
ಇದನ್ನೂ ಓದಿ: IPL 2025: RCB ತಂಡಕ್ಕೆ ಕೆರಿಬಿಯನ್ ದೈತ್ಯ ಎಂಟ್ರಿ
ಅಂದರೆ ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ಆಟಗಾರರು ಅರ್ಧದಲ್ಲೇ ಟೂರ್ನಿ ತೊರೆಯುವ ಸಾಧ್ಯತೆಯಿದೆ. ಈ ಆಟಗಾರರು ಐಪಿಎಲ್ನ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಆಯಾ ಕ್ರಿಕೆಟ್ ಬೋರ್ಡ್ನಿಂದ ಅನುಮತಿ ದೊರೆಯಬೇಕು. ಹೀಗಾಗಿಯೇ ಪ್ರಮುಖ ಆಟಗಾರರಿಗೆ ಅನುಮತಿ ನೀಡುವಂತೆ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗಳಿಗೆ ಬಿಸಿಸಿಐ ಮನವಿ ಸಲ್ಲಿಸಿದೆ.