IPL 2025: ಸೌತ್ನತ್ತ ಮುಖ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್
IPL 2025: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಆದರೆ ಈ ಬಾರಿ ಡೆಲ್ಲಿ ಪಡೆ 2ನೇ ತವರು ಮೈದಾನವನ್ನು ಘೋಷಿಸಿದೆ. ಅದರಂತೆ ದೆಹಲಿಯಲ್ಲಿ 5 ಮ್ಯಾಚ್ಗಳನ್ನು ಆಡಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಶಾಖಪಟ್ಟಣದಲ್ಲಿ ಮತ್ತೆರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಪಂದ್ಯ ಗೆಲ್ಲಲು ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 22 ರಿಂದ ಶುರುವಾಗಲಿರುವ ಈ ಬಾರಿಯ ಟೂರ್ನಿಯು ಒಟ್ಟು 13 ಸ್ಟೇಡಿಯಂಗಳಲ್ಲಿ ನಡೆಯಲಿದೆ. ಇಲ್ಲಿ 10 ತಂಡಗಳಿಗೆ 10 ಹೋಮ್ ಗ್ರೌಂಡ್ ಅಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಬಾರಿ ಮೂರು ತಂಡಗಳು 2 ಹೋಮ್ ಗ್ರೌಂಡ್ ಅನ್ನು ಘೋಷಿಸಿದೆ.
ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಭಾರತದ ವಿಶಾಖಪಟ್ಟಣದಲ್ಲಿನ ವೈಎಸ್ಆರ್ ಸ್ಟೇಡಿಯಂ ಅನ್ನು 2ನೇ ಆಯ್ಕೆಯಾಗಿ ಆಯ್ದುಕೊಂಡಿರುವುದು ವಿಶೇಷ. ಅಂದರೆ ಕಳೆದ ಬಾರಿಯಂತೆ ಈ ಬಾರಿ ಕೂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ವೈಎಸ್ಆರ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ.
ಸೌತ್ನತ್ತ ಮುಖ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್:
IPL 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಂಧ್ರಪ್ರದೇಶದ ವಿಶಾಖಪಟ್ಟಣದ ವೈಎಸ್ಆರ್ ಸ್ಟೇಡಿಯಂನಲ್ಲಿ ಒಂದು ಪಂದ್ಯವಾಡಿತ್ತು. ಇದಕ್ಕೆ ಮುಖ್ಯ ಕಾರಣ ಕಳೆದ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ನ ನಾಕೌಟ್ ಪಂದ್ಯಗಳನ್ನು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವುದು.
ಅಂದರೆ WPL ಮತ್ತು IPL ಪಂದ್ಯಗಳು ಜೊತೆಯಾಗಿ ನಡೆದಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತನ್ನ ಒಂದು ಪಂದ್ಯವನ್ನು ವಿಶಾಖಪಟ್ಟಣದಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವೈಎಸ್ಆರ್ ಸ್ಟೇಡಿಯಂ ಅನ್ನು 2ನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದ್ದು, ವಿಶಾಖಪಟ್ಟಣದಲ್ಲಿ 2 ಪಂದ್ಯಗಳನ್ನಾಡಲು ನಿರ್ಧರಿಸಿದೆ.
ಅದರಂತೆ ವೈಎಸ್ಆರ್ ಸ್ಟೇಡಿಯಂನಲ್ಲಿ ಮಾರ್ಚ್ 24 ರಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಇದೇ ಮೈದಾನದಲ್ಲಿ ಮಾರ್ಚ್ 30 ರಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಪಡೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಅಲ್ಲದೆ, ರಾಜಸ್ಥಾನ್ ರಾಯಲ್ಸ್ ತಂಡ ಬರ್ಸಪರ ಸ್ಟೇಡಿಯಂ ಮತ್ತು ಸವಾಯಿ ಮಾನ್ಸಿಂಗ್ ಕ್ರೀಡಾಂಗಣಗಳನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಮುಲ್ಲನ್ಪುರ್ ಹಾಗೂ ಧರ್ಮಶಾಲಾದಲ್ಲಿ ಹೋಮ್ ಮ್ಯಾಚ್ಗಳನ್ನು ನಿರ್ಧರಿಸಿದೆ. ಅದರಂತೆ ಈ ಬಾರಿ ಒಟ್ಟು 13 ಸ್ಡೇಡಿಯಂಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ
