ಐಪಿಎಲ್ 2025ರ ಸಿದ್ಧತೆಗಳು ಶುರುವಾದ ಬೆನ್ನಲ್ಲೇ RTM ಆಯ್ಕೆಯು ಚರ್ಚಾ ವಿಷಯವಾಗಿದೆ. ಹೀಗೆ ಚರ್ಚೆಯಾಗಲು ಮುಖ್ಯ ಕಾರಣ ಬಹುತೇಕ ಫ್ರಾಂಚೈಸಿಗಳು ಮೆಗಾ ಹರಾಜಿಗೂ ಮುನ್ನ RTM ಆಯ್ಕೆ ನೀಡಬೇಕೆಂಬ ಬೇಡಿಕೆಯಿಟ್ಟಿರುವುದು. ಈ ಬೇಡಿಕೆಯ ಬೆನ್ನಲ್ಲೇ ಏನಿದು ಆರ್ಟಿಎಂ ಎಂಬ ಪ್ರಶ್ನೆ ಕೂಡ ಕೂಡ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಆರ್ಟಿಎಂ ಕಾರ್ಡ್ ಎಂದರೆ ರೈಟ್ ಟು ಮ್ಯಾಚ್ (RTM) ಆಯ್ಕೆ. ಅಂದರೆ ಮೆಗಾ ಹರಾಜಿನಲ್ಲಿ ಆಟಗಾರರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಆಯ್ಕೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಆಟಗಾರರ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವುದು.
ಇಲ್ಲಿ ಒಂದು ಫ್ರಾಂಚೈಸಿಯು ಆರ್ಟಿಎಂ ಆಯ್ಕೆ ಬಳಸಿ ಆಟಗಾರರನ್ನು ಬಿಡುಗಡೆ ಮಾಡಿದರೂ, ಆ ಆಟಗಾರನ ಸಂಪೂರ್ಣ ಹಕ್ಕು ಬಿಡುಗಡೆ ಮಾಡಿದ ಫ್ರಾಂಚೈಸಿಯ ಬಳಿಯೇ ಇರಲಿದೆ.
ಉದಾಹರಣೆಗೆ: ಆರ್ಸಿಬಿ ತಂಡವು ರಜತ್ ಪಾಟಿದಾರ್ ಅವರನ್ನು ಹರಾಜಿಗಾಗಿ ರಿಲೀಸ್ ಮಾಡಿದೆ ಎಂದಿಟ್ಟುಕೊಳ್ಳಿ. ಆದರೆ ಈ ಬಿಡುಗಡೆಗೂ ಮುನ್ನ ಆರ್ಟಿಎಂ ಆಯ್ಕೆ ಬಳಸಿ ರಿಲೀಸ್ ಮಾಡಿದರೆ, ಪಾಟಿದಾರ್ ಖರೀದಿ ಮೇಲಿನ ಹಕ್ಕು ಆರ್ಸಿಬಿ ಬಳಿಯೇ ಇರುತ್ತದೆ.
ಇನ್ನು ಆರ್ಟಿಎಂ ಆಯ್ಕೆ ಬಳಸಿ ಬಿಡುಗಡೆ ಮಾಡಲಾದ ರಜತ್ ಪಾಟಿದಾರ್ಗಾಗಿ ಸಿಎಸ್ಕೆ ಫ್ರಾಂಚೈಸಿಯು 10 ಕೋಟಿ ರೂ. ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಆರ್ಸಿಬಿ ಪಾಟಿದಾರ್ ಅವರನ್ನು ಮರಳಿ ಖರೀದಿಸಬಹುದು.
ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ. ಹೀಗಾಗಿಯೇ ಈ ಆಯ್ಕೆಯನ್ನು ಆಟಗಾರರ ಮೇಲಿನ ಹಕ್ಕುಸ್ವಾಮ್ಯ ಎನ್ನಲಾಗುತ್ತದೆ.
ಆರ್ಟಿಎಂ ಆಯ್ಕೆಯಲ್ಲಿ ಬಿಡುಗಡೆಯಾದ ಆಟಗಾರರು ಬಿಡ್ಡಿಂಗ್ ಮೂಲಕ ಹೆಚ್ಚಿನ ಮೊತ್ತ ಪಡೆಯಬಹುದು. ಒಂದು ವೇಳೆ ಯಾರು ಸಹ ಬಿಡ್ಡಿಂಗ್ ಮಾಡದಿದ್ದರೆ ಐಪಿಎಲ್ನಿಂದ ಹೊರಬೀಳುವುದಿಲ್ಲ. ಬದಲಾಗಿ ಆರ್ಟಿಎಂ ಬಳಸಿದ ಫ್ರಾಂಚೈಸಿ ತಂಡದಲ್ಲೇ ಉಳಿಯುತ್ತಾರೆ.
ಐಪಿಎಲ್ನಲ್ಲಿ ಬಹುತೇಕ ಫ್ರಾಂಚೈಸಿಗಳು ಮೆಗಾ ಹರಾಜಿಗೂ ಮುನ್ನ ಈ ಆಯ್ಕೆ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಇದಕ್ಕೆ ಮುಖ್ಯ ಕಾರಣ ರಿಟೈನ್ ಆಟಗಾರರ ಸಂಖ್ಯೆ ಕಡಿಮೆ ಇರುವುದು. ಅಂದರೆ ಮೆಗಾ ಹರಾಜಿಗೂ ಮುನ್ನ ಕೇವಲ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರೆ, ಉಳಿದ 21 ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದರಿಂದ ಮೆಗಾ ಹರಾಜಿನ ಬಳಿಕ ಇಡೀ ತಂಡ ಬದಲಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಒಂದು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆಯಾಗುತ್ತದೆ.
ಉದಾಹರಣೆಗೆ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕಳೆದ ಸೀಸನ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆ ತಂಡದ ಪ್ಲೇಯಿಂಗ್ ಇಲೆವೆನ್ನ ಬಹುತೇಕ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಲು ಕೆಕೆಆರ್ ಬಯಸುತ್ತಿದೆ. ಆ ಆಟಗಾರರನ್ನು ಉಳಿಸಿಕೊಳ್ಳಬೇಕಿದ್ದರೆ ಆರ್ಟಿಎಂ ಆಯ್ಕೆ ಇರಲೇಬೇಕು. ಇಲ್ಲದಿದ್ದರೆ ಕೆಕೆಆರ್ ಆಟಗಾರರು ಇತರೆ ಫ್ರಾಂಚೈಸಿಗಳ ಪಾಲಾಗುವ ಸಾಧ್ಯತೆ ಹೆಚ್ಚು.
ಇಲ್ಲಿ ಕೆಕೆಆರ್ ಫ್ರಾಂಚೈಸಿಯು 8 ಆರ್ಟಿಎಂ ಆಯ್ಕೆಗಳಿಗಾಗಿ ಬೇಡಿಕೆಯಿಟ್ಟಿದೆ ಎಂದು ತಿಳಿದು ಬಂದಿದೆ. ಈ ಮೂಲಕ ತನ್ನ ಪ್ಲೇಯಿಂಗ್ ಇಲೆವೆನ್ನ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದೆ. ಆದರೆ ಪಂಜಾಬ್ ಕಿಂಗ್ಸ್ ಸೇರಿದಂತೆ ಕೆಲವು ಫ್ರಾಂಚೈಸಿಗಳು ಆರ್ಟಿಎಂ ಆಯ್ಕೆ ಇರಬಾರದೆಂಬ ವಾದವನ್ನು ಸಹ ಮುಂದಿಟ್ಟಿದ್ದಾರೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ಆರ್ಟಿಎಂ ಆಯ್ಕೆಯನ್ನು ನೀಡಲಿದೆಯಾ ಎಂಬುದು ಪ್ರಶ್ನೆ.
ಐಪಿಎಲ್ ಮೆಗಾ ಹರಾಜಿನ ವೇಳೆ ಮಾತ್ರ ಆರ್ಟಿಎಂ ಆಯ್ಕೆಗಳನ್ನು ಬಳಸಲಾಗುತ್ತದೆ. 2018 ರ ಮೆಗಾ ಹರಾಜಿನ ವೇಳೆ ಈ ನಿಯಮವನ್ನು ಪರಿಚಯಿಸಲಾಗಿತ್ತು. ಈ ವೇಳೆ ಮೂವರು ಆಟಗಾರರ ಮೇಲೆ ಆರ್ಟಿಎಂ ಆಯ್ಕೆ ಬಳಸಲು ಅವಕಾಶ ನೀಡಲಾಗಿತ್ತು.
ಆದರೆ 2022 ರಲ್ಲಿ ನಡೆದ ಮೆಗಾ ಹರಾಜಿನ ವೇಳೆ ಈ ನಿಯಮವನ್ನು ತೆಗೆದು ಹಾಕಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಎರಡು ಹೊಸ ತಂಡಗಳ ಸೇರ್ಪಡೆ. ಅಂದರೆ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಹರಾಜಿನಲ್ಲಿ ಕಾಣಿಸಿಕೊಂಡಿದ್ದರಿಂದ ಈ ನಿಮಯವನ್ನು ಬಳಸಲಾಗಿರಲಿಲ್ಲ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಟಿಎಂ ಆಯ್ಕೆಗಾಗಿ ಫ್ರಾಂಚೈಸಿಗಳು ಮನವಿ ಮಾಡಿದೆ. ಹೀಗಾಗಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್ಟಿಎಂ ಆಯ್ಕೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.