IPL 2025: 8, 7, 4, ಮೆಗಾ ಹರಾಜಿಗೆ ಬ್ರೇಕ್: ಐಪಿಎಲ್​​ ಫ್ರಾಂಚೈಸಿ ಬೇಡಿಕೆಯಿಂದ ಕಂಗೆಟ್ಟ ಬಿಸಿಸಿಐ

|

Updated on: Aug 01, 2024 | 2:24 PM

IPL 2025: ಬಿಸಿಸಿಐ ಮತ್ತು ಐಪಿಎಲ್​ ಮಾಲೀಕರ ಸಭೆಯಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಪ್ರಾಯಗಳು ಕಂಡು ಬಂದಿದೆ. ಕೆಲ ಫ್ರಾಂಚೈಸಿಗಳು ಮೆಗಾ ಹರಾಜನ್ನು ಮುಂದುವರೆಸಬೇಕೆಂದು ತಿಳಿಸಿದರೆ, ಮತ್ತೆ ಕೆಲ ತಂಡಗಳ ಮಾಲೀಕರು ಮೆಗಾ ಆಕ್ಷನ್​ ಅನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇತ್ತ ಮೆಗಾ ಹರಾಜಿಗಾಗಿ ರೂಪುರೇಷೆ ಸಿದ್ಧಪಡಿಸಲು ಬಿಸಿಸಿಐ ಕರೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಮೂಡಿಬರದಿರುವುದು ಇದೀಗ ಬಿಸಿಸಿಐನ ಚಿಂತೆ ಹೆಚ್ಚಿಸಿದೆ.

IPL 2025: 8, 7, 4, ಮೆಗಾ ಹರಾಜಿಗೆ ಬ್ರೇಕ್: ಐಪಿಎಲ್​​ ಫ್ರಾಂಚೈಸಿ ಬೇಡಿಕೆಯಿಂದ ಕಂಗೆಟ್ಟ ಬಿಸಿಸಿಐ
IPL 2025
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ ಮೆಗಾ ಹರಾಜಿನ ರೂಪುರೇಷೆಗಳ ಬಗ್ಗೆ ಚರ್ಚಿಸಲು ಬಿಸಿಸಿಐ ಐಪಿಎಲ್​ ಫ್ರಾಂಚೈಸಿಗಳೊಂದಿಗೆ ಸಭೆ ನಡೆಸಿದೆ. ಈ ಮುಂಬೈನಲ್ಲಿ ನಡೆದ ಈ ಸಭೆಯಲ್ಲಿ ಮೆಗಾ ಹರಾಜು ಬೇಡವೆಂಬ ಕೂಗುಗಳು ಕೇಳಿ ಬಂದಿರುವುದು ವಿಶೇಷ. ಅಂದರೆ ಮೆಗಾ ಹರಾಜಿನ ಸಿದ್ಧತೆಗಾಗಿ ನಡೆಸಲಾದ ಈ ಮೀಟಿಂಗ್​ನಲ್ಲಿ ಬಹುತೇಕ ಫ್ರಾಂಚೈಸಿಗಳು ಮೆಗಾ ಆಕ್ಷನ್​ ಅನ್ನು ಕೈ ಬಿಡುವಂತೆ ಬಿಸಿಸಿಐಗೆ ಮನವಿ ಮಾಡಿದೆ.

ಈ ಸಭೆಯಲ್ಲಿ ಮೆಗಾ ಹರಾಜಿನ ಕುರಿತಾದ ಎಲ್ಲಾ ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಗಳು ಮುಂದಿಟ್ಟಿದ್ದಾರೆ. ಈ ವೇಳೆ ಕೆಲ ಫ್ರಾಂಚೈಸಿಗಳು ಕೆಲ ಬೇಡಿಕೆಗಳನ್ನು ಸಲ್ಲಿಸಿದ್ದು, ಆ ಬೇಡಿಕೆಗಳ ವಿವರಗಳು ಈ ಕೆಳಗಿನಂತಿದೆ…

  • ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮೆಗಾ ಹರಾಜು ನಡೆಸುವುದಾದರೆ ಆರ್​ಟಿಎಂ ಆಯ್ಕೆಯೊಂದಿಗೆ 8 ಆಟಗಾರರನ್ನು ರಿಟೈನ್ ಮಾಡಲು ಅವಕಾಶ ನೀಡಬೇಕೆಂದು ಕೋರಿದೆ.
  • ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಕೇವಲ 4 ಆಟಗಾರರನ್ನು ಮಾತ್ರ ರಿಟೈನ್ ಮಾಡಲು ಅವಕಾಶ ನೀಡಿದರೆ ಸಾಕು, ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದೆಂದು ತಿಳಿಸಿದೆ.
  • ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಯಾವುದೇ ನಿಯಮಗಳು ಅನ್ವಯವಾಗದಂತೆ 7 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಆಯ್ಕೆ ನೀಡಬೇಕೆಂದು ಮನವಿ ಮಾಡಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್​ನಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ಬಿಸಿಸಿಐ ಮುಂದಿಟ್ಟಿದೆ.
  • ಬಹುತೇಕ ಫ್ರಾಂಚೈಸಿಗಳು ಮೆಗಾ ಹರಾಜು ನಡೆಸದಂತೆ ಮನವಿ ಮಾಡಿದೆ. ಅಲ್ಲದೆ ಇನ್ಮುಂದೆ ಕೇವಲ ಮಿನಿ ಹರಾಜು ಆಯೋಜಿಸಿದರೆ ಸಾಕು ಎಂಬ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.
  • ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮೆಗಾ ಹರಾಜು ಇರಬೇಕೆಂದು ತಿಳಿಸಿದ್ದಾರೆ. ಇದರಿಂದ ತಂಡಗಳ ಬದಲಾವಣೆಯೊಂದಿಗೆ ಐಪಿಎಲ್​ ಆಕರ್ಷಕವಾಗಿರಲಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
  • ಒಂದು ವೇಳೆ ಮೆಗಾ ಹರಾಜು ಮುಂದುವರೆಸಲು ಬಯಸಿದರೆ, 3 ವರ್ಷಗಳ ಬದಲಿಗೆ 5 ವರ್ಷಗಳಿಗೊಮ್ಮೆ ಆಯೋಜಿಸುವಂತೆ ಎಸ್​ಆರ್​ಹೆಚ್​ ಸೇರಿದಂತೆ ಕೆಲ ಫ್ರಾಂಚೈಸಿಗಳು ಆಗ್ರಹಿಸಿದೆ.
  • ಕೆಲ ಫ್ರಾಂಚೈಸಿಗಳು ಹೆಚ್ಚಿನ ಆರ್​ಟಿಎಂ ಕಾರ್ಡ್ ಆಯ್ಕೆ ಬಳಸಲು ಅವಕಾಶ ನೀಡಬೇಕೆಂದು ತಿಳಿಸಿದೆ. ಆದರೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಹಳೆಯ ಆರ್​ಟಿಎಂ ನಿಯಮವನ್ನು ಮುಂದುವರೆಸಬೇಕೆಂದು ಮನವಿ ಮಾಡಿದೆ.
  • ಐಪಿಎಲ್ ಹರಾಜು ಮೊತ್ತ ಹೆಚ್ಚಳಕ್ಕೆ ಎಲ್ಲಾ ಫ್ರಾಂಚೈಸಿಗಳು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಮೆಗಾ ಆಕ್ಷನ್​ನ ಹರಾಜು ಮೊತ್ತ 100 ಕೋಟಿಯಿಂದ 120 ಅಥವಾ 140 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ.
  • ಬಹುತೇಕ ಫ್ರಾಂಚೈಸಿಗಳು ಮಿನಿ ಹರಾಜಿಗೆ ಆಸಕ್ತಿ ತೋರಿಸಿದ್ದಾರೆ. ಆಟಗಾರರ ರಿಟೈನ್, ಆರ್​ಟಿಎಂ ಆಯ್ಕೆಗಳ ಸಮಸ್ಯೆ ಎದುರಾಗುವುದು ಮೆಗಾ ಹರಾಜು ನಡೆಸುವುದರಿಂದ. ಹೀಗಾಗಿ ಪ್ರತಿ ಸೀಸನ್​ನಲ್ಲೂ ಮಿನಿ ಹರಾಜು ನಡೆಸುವುದು ಸೂಕ್ತ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: IPL 2025: RTM ಗಾಗಿ ಐಪಿಎಲ್ ಫ್ರಾಂಚೈಸಿಗಳ ಮನವಿ: ಏನಿದು ಆಯ್ಕೆ?

ಒಟ್ಟಿನಲ್ಲಿ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಫ್ರಾಂಚೈಸಿಗಳ ಕಡೆಯಿಂದ ಒಮ್ಮತದ ಅಭಿಪ್ರಾಯ ಮೂಡಿಬಂದಿಲ್ಲ ಎಂಬುದು ಸ್ಪಷ್ಟ. ಇನ್ನು ಈ ಅಭಿಪ್ರಾಯಗಳಲ್ಲಿ ಬಹುತೇಕ ಫ್ರಾಂಚೈಸಿಗಳು ಮೆಗಾ ಹರಾಜನ್ನು ಕೈ ಬಿಡಬೇಕೆಂದು ಆಗ್ರಹಿಸಿರುವುದೇ ಬಿಸಿಸಿಐ ಪಾಲಿಗೆ ಅಚ್ಚರಿ. ಹೀಗಾಗಿ ಈ ಬಾರಿ ಮೆಗಾ ಹರಾಜಿನ ಹೆಸರಿನಲ್ಲಿ ಮಿನಿ ಹರಾಜು ನಡೆದರೂ ಅಚ್ಚರಿಪಡಬೇಕಿಲ್ಲ.