IPL 2025: 49 ನೆನಪಿದ್ಯಾ? RCB ಕಾಲೆಳೆದ KKR
IPL ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. ಈ ಹೀನಾಯ ದಾಖಲೆಯನ್ನು ಪ್ರಸ್ತಾಪಿಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ಆರ್ಸಿಬಿ ತಂಡದ ಕಾಲೆಳೆದಿದೆ. ಈ ಮೂಲಕ ಐಪಿಎಲ್ ಆರಂಭಕ್ಕೂ ಮುನ್ನವೇ ಕೆಕೆಆರ್ ಮೈಂಡ್ ಗೇಮ್ ಶುರು ಮಾಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾಲೆಳೆದಿದೆ. ಅದು ಕೂಡ 49 ರನ್ಗಳ ಆಲೌಟ್ ಅನ್ನು ಪ್ರಸ್ತಾಪಿಸುವ ಮೂಲಕ ಎಂಬುದೇ ವಿಶೇಷ. 2017 ರಲ್ಲಿ ಆರ್ಸಿಬಿ ತಂಡವು ಕೆಕೆಆರ್ ನೀಡಿದ 131 ರನ್ಗಳ ಗುರಿಯನ್ನು ಬೆನ್ನತ್ತಿ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಈ ವೇಳೆ ಆರ್ಸಿಬಿ ಪರ ಮೂಡಿಬಂದ ಗರಿಷ್ಠ ವೈಯುಕ್ತಿಕ ಸ್ಕೋರ್ 9 ರನ್. ಇದನ್ನು ಬಾರಿಸಿದ್ದು ಕೇದರ್ ಜಾಧವ್.
ಅಂದು ಕೇವಲ 49 ರನ್ಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಸರ್ವಪತನ ಕಂಡ ತಂಡವೆಂಬ ಕೆಟ್ಟ ದಾಖಲೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿತು. ಇದನ್ನೇ ಪ್ರಸ್ತಾಪಿಸಿ ಇದಿಗ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡು ಕೆಕೆಆರ್, ಆರ್ಸಿಬಿ ತಂಡದ ಕಾಲೆಳೆದಿದೆ.
ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿರುವುದು. ಮಾರ್ಚ್ 22 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಕೆಕೆಆರ್ ಹಳೆಯ ಸೋಲಿನ ಕಹಿ ನೆನಪನ್ನು ನೆನಪಿಸಿದೆ.
ಈ ಮೂಲಕ ಮೊದಲ ಪಂದ್ಯಕ್ಕೂ ಮುನ್ನವೇ ಕೊಲ್ಕತ್ತಾ ನೈಟ್ ರೈಡರ್ಸ್ ಆರ್ಸಿಬಿ ವಿರುದ್ಧ ಮೈಂಡ್ ಗೇಮ್ ಆರಂಭಿಸಿದೆ. ಕೆಕೆಆರ್ ಕಾಲೆಳೆಯುವಿಕೆಗೆ ಆರ್ಸಿಬಿ ಕಡೆಯಿಂದ ಈವರೆಗೆ ಯಾವುದೇ ಪ್ರತ್ಯುತ್ತರ ಬಂದಿಲ್ಲ.
ಅಂತಹದೊಂದು ಕೌಂಟರ್ ಅನ್ನು ಮಾರ್ಚ್ 22 ರಂದು ನಿರೀಕ್ಷಿಸಬಹುದು. ಏಕೆಂದರೆ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆರ್ಸಿಬಿ ಬಗ್ಗು ಬಡಿದರೆ, ಸೋಷಿಯಲ್ ಮೀಡಿಯಾದಲ್ಲಿ 49 ರನ್ಗಳ ಟ್ರೋಲ್ಗೆ ಉತ್ತರ ಸಿಗಬಹುದು. ಅಲ್ಲಿಯವರೆಗೂ ಆರ್ಸಿಬಿ ಅಭಿಮಾನಿಗಳು ಕಾಯಲೇಬೇಕು.
Published On - 2:20 pm, Tue, 18 February 25
