
ತವರಿನಿಂದ ಹೊರಗೆ ನಡೆಯುತ್ತಿರುವ ಪಂದ್ಯಗಳಲ್ಲಿ ಸತತವಾಗಿ ಗೆಲುವು ಸಾಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ತವರು ಮೈದಾನ ಮಾತ್ರ ದುಸ್ವಪ್ನವಾಗಿ ಕಾಡುತ್ತಿದೆ. ಆರ್ಸಿಬಿಗೆ ತವರು ಮೈದಾನವಾಗಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) ಇದುವರೆಗೂ ತವರಿನ ತಂಡಕ್ಕೆ ಯಾವ ರೀತಿಯಲ್ಲೂ ನೆರವಿಗೆ ಬಂದಿಲ್ಲ. ಇಲ್ಲಿ ಟಾಸ್ ಗೆದ್ದ ತಂಡಕ್ಕೆ ಬಹುಪಾಲು ಲಾಭವಾಗುತ್ತಿರುವ ಕಾರಣ ಆರ್ಸಿಬಿ ವಿಶೇಷ ತಂತ್ರಗಾರಿಕೆಯೊಂದಿಗೆ ಅಖಾಡಕ್ಕಿಳಿಯಬೇಕಿದೆ. ಹೀಗಾಗಿ ತವರಿನಲ್ಲಿ ಆಡಿರುವ ಎರಡು ಪಂದ್ಯಗಳನ್ನು ಸೋತಿರುವ ಆರ್ಸಿಬಿ ಪಿಚ್ಗೆ ಅನುಗುಣವಾಗಿ ತನ್ನ ಪ್ಲೇಯಿಂಗ್ 11 ಸಿದ್ದಪಡಿಸಬೇಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಆರ್ಸಿಬಿ ಸಾಂಘಿಕ ಹೋರಾಟ ನೀಡಿತ್ತಾದರೂ ಈ ಮೈದಾನದಲ್ಲಿ ಗುರಿ ಬೆನ್ನಟ್ಟುವ ತಂಡಕ್ಕೆ ಹೆಚ್ಚಿನ ನೆರವು ಸಿಗುವ ಕಾರಣ ಪಂದ್ಯವನ್ನು ಸೋಲಬೇಕಾಯಿತು. ಅಂದರೆ ಈ ಎರಡೂ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿಗೆ 200 ಕ್ಕೂ ಅಧಿಕ ರನ್ಗಳನ್ನು ಕಲೆಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಗುರಿ ಬೆನ್ನಟ್ಟುವ ತಂಡಕ್ಕೆ ಸುಲಭ ಗುರಿ ಸಿಗುತ್ತಿತ್ತು. ಇದೀಗ ನಾಳಿನ ಪಂದ್ಯದಲ್ಲೂ ಆರ್ಸಿಬಿ ಒಂದು ವೇಳೆ ಟಾಸ್ ಸೋತರೆ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಆರ್ಸಿಬಿ ಈ ಪಂದ್ಯದಲ್ಲಾದರೂ 200 ಕ್ಕೂ ಅಧಿಕ ರನ್ ಕಲೆಹಾಕಲು ಪ್ರಯತ್ನಿಸಬೇಕು. ಇದರರ್ಥ ತಂಡದ ಬ್ಯಾಟರ್ಗಳು ಅಮೋಘ ಪ್ರದರ್ಶನ ನೀಡಬೇಕು.
ಇನ್ನು ತಂಡದ ಪ್ಲೇಯಿಂಗ್ 11 ಬಗ್ಗೆ ಹೇಳುವುದಾದರೆ.. ತವರಿನಲ್ಲಿ 2 ಪಂದ್ಯಗಳನ್ನು ಸೋತಿದ್ದರೂ ತವರಿನ ಹೊರಗೆ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಕಾರಣ ಆರ್ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ತೀರ ಕಡಿಮೆ ಇವೆ. ಇತ್ತ ಪಂಜಾಬ್ ತಂಡ ಕೂಡ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕಿ ಗೆಲುವು ಸಾಧಿಸಿರುವ ಕಾರಣ ಪ್ಲೇಯಿಂಗ್ 11ನಲ್ಲಿ ಬದಲಾವಣೆ ತರುವ ಸಾಧ್ಯತೆ ಕಡಿಮೆ. ಆದಾಗ್ಯೂ ಕಳೆದ ಪಂದ್ಯದಲ್ಲಿ ಪರಿಣಾಮಕಾರಿಯಾಗದ ಸೂರ್ಯಾಂಶ್ ಶೆಡ್ಜ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಷ್ ಬದಲು ಮಾರ್ಕಸ್ ಸ್ಟೊಯಿನಿಸ್ ಮತ್ತು ವಿಜಯ್‌ಕುಮಾರ್ ವೈಶಾಕ್ರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಬಹುದು.
IPL 2025: ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ; ರದ್ದಾಗುತ್ತಾ ಆರ್ಸಿಬಿ- ಪಂಜಾಬ್ ಪಂದ್ಯ?
ಆರ್ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ಯಶ್ ದಯಾಲ್.
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಯಾನ್ಸನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ವಿಜಯ್‌ಕುಮಾರ್ ವೈಶಾಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ