
ಐಪಿಎಲ್ 2025 (IPL 2025) ರ 64 ನೇ ಪಂದ್ಯವು ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (GT vs LSG) ನಡುವೆ ನಡೆಯಿತು. ಈ ಪಂದ್ಯವನ್ನು 33 ರನ್ಗಳಿಂದ ಗೆದ್ದುಕೊಳ್ಳುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಯಶಸ್ವಿಯಾಯಿತು. ಈ ಗೆಲುವು ಲಕ್ನೋ ತಂಡಕ್ಕೆ ಯಾವುದೇ ಪ್ರಯೋಜನ ತಂದುಕೊಡದಿದ್ದರೂ, ಗುಜರಾತ್ ಟೈಟನ್ಸ್‌ನ ಅಗ್ರ 2 ಸ್ಥಾನ ಪಡೆಯುವ ಹಾದಿ ಕಠಿಣವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಸೋಲಿನೊಂದಿಗೆ ಅಗ್ರ 2 ರಲ್ಲಿ ಸುಲಭವಾಗಿ ಉಳಿಯುವ ಗುಜರಾತ್ ಟೈಟನ್ಸ್ ಕನಸು ಭಗ್ನಗೊಂಡಿದೆ. ಏಕೆಂದರೆ ಈಗ ಅಗ್ರ 2 ಸ್ಥಾನಗಳಿಗೆ ಸ್ಪರ್ಧೆ ಮತ್ತಷ್ಟು ರೋಚಕವಾಗಿದೆ. ಗುಜರಾತ್ ಟೈಟನ್ಸ್ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಅಗ್ರಸ್ಥಾನಕ್ಕೇರಲು ಇನ್ನೂ ಒಂದು ಅವಕಾಶವಿದೆ.
ಈ ಪಂದ್ಯದಲ್ಲಿ ಟಾಸ್ ಗುಜರಾತ್ ಟೈಟನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲಯ ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ನಡೆಸಿತು. ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿದರು. ನಂತರ ಮಿಚೆಲ್ ಮಾರ್ಷ್ ಅವರ ಬಿರುಗಾಳಿ ಪ್ರಾರಂಭವಾಯಿತು. ಮಿಚೆಲ್ ಮಾರ್ಷ್ 64 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್‌ಗಳಿಂದ 117 ರನ್ ಗಳಿಸಿದರು. ನಿಕೋಲಸ್ ಪೂರನ್ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 56 ರನ್ ಗಳಿಸಿದರೆ, ರಿಷಭ್ ಪಂತ್ 6 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ ಅಜೇಯ 16 ರನ್ ಗಳಿಸಿದರು.
ಈ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಪರ ಸಾಯಿ ಸುದರ್ಶನ್ ಮತ್ತು ಶುಭ್ಮನ್ ಗಿಲ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಇಬ್ಬರೂ ಆಟಗಾರರು ಉತ್ತಮ ಆರಂಭ ಪಡೆದರು ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಸುದರ್ಶನ್ 21 ರನ್ ಮತ್ತು ಗಿಲ್ 35 ರನ್ ಗಳಿಸಿ ಔಟಾದರು. ಇದಾದ ನಂತರ, ಮೂರನೇ ಕ್ರಮಾಂಕದಲ್ಲಿ ಬಂದ ಜೋಸ್ ಬಟ್ಲರ್ ಕೂಡ 33 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಯಲ್ಲಿ, ಶೆರ್ಫೇನ್ ರುದರ್ಫೋರ್ಡ್ ಮತ್ತು ಶಾರುಖ್ ಖಾನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶಾರುಖ್ 57 ರನ್‌ಗಳ ಇನ್ನಿಂಗ್ಸ್ ಆಡಿದರೆ, ಲಕ್ನೋ ಪರ ವಿಲಿಯಂ ಒ’ರೂರ್ಕ್ ಮೂರು ವಿಕೆಟ್ ಪಡೆದರು.
IPL 2025: ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ಟೈಟಾನ್ಸ್ ತಂಡ ಇದುವರೆಗೆ 13 ಪಂದ್ಯಗಳನ್ನು ಆಡಿದೆ. ಆ ಪೈಕಿ 9 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ 18 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಈಗ ಗುಜರಾತ್ ಕೊನೆಯ ಪಂದ್ಯವನ್ನು ಗೆದ್ದರೆ, ಅದರ ಅಂಕ 20 ಆಗುತ್ತದೆ. ಹೀಗಾಗಿ ಗುಜರಾತ್ ಟೈಟನ್ಸ್‌ನ ಅಗ್ರ 2 ಸ್ಥಾನ ಈಗ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಈ ಎರಡೂ ತಂಡಗಳಿಗೆ ಟೂರ್ನಿಯಲ್ಲಿ ಎರಡು ಪಂದ್ಯಗಳು ಉಳಿದಿವೆ. ಎರಡೂ ತಂಡಗಳು ಪ್ರಸ್ತುತ ಅಂಕಪಟ್ಟಿಯಲ್ಲಿ 17 ಅಂಕಗಳನ್ನು ಹೊಂದಿದ್ದು, ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಇವುಗಳ ಬಳಿ 21 ಅಂಕಗಳಿರುತ್ತವೆ. ಈ ಮೂಲಕ ಅಗ್ರ 2 ರಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ