- Kannada News Photo gallery Cricket photos Jasprit Bumrah's IPL Dominance: 9 Seasons, 15+ Wickets Each
IPL 2025: ಸತತ 9 ಆವೃತ್ತಿ; ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ
Jasprit Bumrah's IPL Dominance: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪಿದೆ. ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಪ್ರದರ್ಶನ ಇದಕ್ಕೆ ಪ್ರಮುಖ ಕಾರಣ. ಕಳೆದ 9 ಐಪಿಎಲ್ ಸೀಸನ್‌ಗಳಲ್ಲಿಸತತವಾಗಿ 15ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ದಾಖಲೆ ಇದೀಗ ಬುಮ್ರಾ ಪಾಲಾಗಿದೆ. ಅವರ ಅತ್ಯುತ್ತಮ ಎಕಾನಮಿ ರೇಟ್ ಕೂಡ ಮುಂಬೈ ತಂಡದ ಯಶಸ್ಸಿಗೆ ಕಾರಣವಾಗಿದೆ.
Updated on: May 22, 2025 | 10:31 PM

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಪ್ಲೇಆಫ್ ತಲುಪಿದೆ. ಆರಂಭಿಕ ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಈ ತಂಡ, ಕಳೆದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಮುಂಬೈ ತಂಡದ ಈ ಯಶಸ್ಸಿಗೆ ಕಾರಣ ಜಸ್ಪ್ರೀತ್ ಬುಮ್ರಾ ಎಂದರೆ ತಪ್ಪಾಗಲಾರದು.

ಈ ಸೀಸನ್ನಲ್ಲಿ ಇದುವರೆಗೆ 16 ವಿಕೆಟ್‌ಗಳನ್ನು ಕಬಳಿಸಿರುವ ಬುಮ್ರಾ, ಇದರೊಂದಿಗೆ ಐಪಿಎಲ್‌ನಲ್ಲಿ ದಾಖಲೆಯನ್ನು ಸಹ ಸೃಷ್ಟಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 9 ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಏಕೈಕ ಬೌಲರ್ ಜಸ್ಪ್ರೀತ್ ಬುಮ್ರಾ. ಅವರು ಸತತ 9 ಸೀಸನ್‌ಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2016 ರಿಂದ ತಮ್ಮ ಯಶಸ್ಸಿನ ಓಟವನ್ನು ಮುಂದುವರೆಸಿರುವ ಬುಮ್ರಾ, ಅಂದಿನಿಂದ ಇಂದಿನವರೆಗೆ ಪ್ರತಿ ಆವೃತ್ತಿಯಲ್ಲೂ 15 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. 2017 ರಲ್ಲಿ 20 ವಿಕೆಟ್ ಕಬಳಿಸಿದ್ದ ಬುಮ್ರಾ, 2018 ರಲ್ಲಿ 17 ವಿಕೆಟ್ ಮತ್ತು 2019 ರಲ್ಲಿ 19 ವಿಕೆಟ್ ಕಬಳಿಸಿದ್ದರು.

2020 ರಲ್ಲಿ 27 ವಿಕೆಟ್ ಉರುಳಿಸಿದ್ದ ಬುಮ್ರಾಗ ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ವರ್ಷವಾಗಿತ್ತು. ಆ ಬಳಿಕ 2021 ರಲ್ಲಿ 21 ವಿಕೆಟ್ ಪಡೆದಿದ್ದ ಬುಮ್ರಾ 2022 ರಲ್ಲಿ 15 ವಿಕೆಟ್, 2024 ರಲ್ಲಿ 20 ವಿಕೆಟ್ ಪಡೆದಿದ್ದಾರೆ. ಇದೀಗ ಈ ಸೀಸನ್ನಲ್ಲಿ ಇದುವರೆಗೆ 16 ವಿಕೆಟ್ ಪಡೆದಿದ್ದಾರೆ.

ಬುಮ್ರಾ ಕೇವಲ ವಿಕೆಟ್ ಪಡೆದಿದ್ದಾರೆ ಎಂದಲ್ಲ. ಇವರ ಎಕಾನಮಿ ರೇಟ್ ಕೂಡ ಅದ್ಭುತವಾಗಿದೆ. ಕಳೆದ 9 ಸೀಸನ್‌ಗಳಲ್ಲಿ 5 ರಲ್ಲಿ ಬುಮ್ರಾ ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 7 ರನ್‌ಗಳಿಗಿಂತ ಕಡಿಮೆಯಿದೆ. ದೊಡ್ಡ ವಿಷಯವೆಂದರೆ ಬುಮ್ರಾ ಎಂದಿಗೂ 8 ರ ಎಕಾನಮಿ ರೇಟ್ನಲ್ಲಿ ರನ್‌ಗಳನ್ನು ನೀಡಿಲ್ಲ. ಬುಮ್ರಾ ಅವರ ಈ ಅಂಕಿಅಂಶಗಳು ನಿಜಕ್ಕೂ ಅದ್ಭುತವಾಗಿವೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್‌ಗಳಿಂದ ಸೋಲಿಸುವ ಮೂಲಕ ಮುಂಬೈ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಆರಂಭದಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿತು. ಆದರೆ ನಂತರ ತಂಡವು ಅದ್ಭುತ ಪುನರಾಗಮನ ಮಾಡಿ ಸತತ 6 ಪಂದ್ಯಗಳನ್ನು ಗೆದ್ದು ನಾಕೌಟ್ ಸುತ್ತಿಗೆ ಎಂಟ್ರಿಕೊಟ್ಟಿದೆ.









