IPL 2025: ಸೋಲಿನೊಂದಿಗೆ ಪ್ರಯಾಣ ಮುಗಿಸಿದ ಹಾಲಿ ಚಾಂಪಿಯನ್​ ಕೆಕೆಆರ್

KKR vs SRH IPL 2025 Match 68: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 68ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಹೆನ್ರಿಕ್ ಕ್ಲಾಸೆನ್ ಅವರ ತ್ವರಿತ ಶತಕ ಮತ್ತು ಟ್ರಾವಿಸ್ ಹೆಡ್ ಅವರ ಅರ್ಧಶತಕದ ನೆರವಿನಿಂದ SRH 278 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಕೆಕೆಆರ್ ತಂಡ ವಿಫಲವಾಯಿತು.

IPL 2025: ಸೋಲಿನೊಂದಿಗೆ ಪ್ರಯಾಣ ಮುಗಿಸಿದ ಹಾಲಿ ಚಾಂಪಿಯನ್​ ಕೆಕೆಆರ್
Srh

Updated on: May 25, 2025 | 11:34 PM

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 (IPL 2025) ರ 68ನೇ ಪಂದ್ಯದಲ್ಲಿ ಕಳೆದ ಐಪಿಎಲ್​ನ ಎರಡು ಫೈನಲಿಸ್ಟ್ ತಂಡಗಳಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ (KKR vs SRH) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಬೃಹತ್ ಅಂತರದಿಂದ ಮಣಿಸುವಲ್ಲಿ ಹೈದರಾಬಾದ್‌ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ಹೈದರಾಬಾದ್‌ 20 ಓವರ್​ಗಳಲ್ಲಿ ಬರೋಬ್ಬರಿ 278 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿದ್ದರ ಪರಿಣಾಮವಾಗಿ ಸುಲಭವಾಗಿ ಸೊಲೊಪ್ಪಿಕೊಂಡಿತು.

ಅಭಿ- ಹೆಡ್ ಆರ್ಭಟ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ವೇಗದ ಆರಂಭ ನೀಡಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 6.5 ಓವರ್‌ಗಳಲ್ಲಿ 92 ರನ್‌ ಸೇರಿಸಿದರು. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 32 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಬಂದ ಹೆನ್ರಿಕ್ ಕ್ಲಾಸೆನ್ ಕೂಡ ಕೇವಲ 39 ಎಸೆತಗಳಲ್ಲಿ 105 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು.

ಕ್ಲಾಸೆನ್ ಕ್ಲಾಸಿಕ್ ಶತಕ

ಕೇವಲ 37 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದ ಕ್ಲಾಸೆನ್​, ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರನೇ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. 269.23 ಸ್ಟ್ರೈಕ್ ರೇಟ್‌ನಲ್ಲಿ ರನ್‌ ಕಲೆಹಾಕಿದ ಕ್ಲಾಸೆನ್ 7 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ, ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್​ಗಳ ಸಹಿತ 76 ರನ್ ಬಾರಿಸಿದರು. ಇಶಾನ್ ಕಿಶನ್ ಕೂಡ 20 ಎಸೆತಗಳಲ್ಲಿ 29 ರನ್ ಗಳಿಸಿದರೆ, ಅನಿಕೇತ್ ವರ್ಮಾ 6 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗಿ ಉಳಿದರು. ಕೆಕೆಆರ್ ಪರ ಸುನಿಲ್ ನರೈನ್ 2 ವಿಕೆಟ್ ಮತ್ತು ವೈಭವ್ ಅರೋರಾ 1 ವಿಕೆಟ್ ಪಡೆದು ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಕೆಕೆಆರ್​ಗೆ ಕಳಪೆ ಆರಂಭ

279 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಸುನಿಲ್ ನರೈನ್ 16 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಕ್ವಿಂಟನ್ ಡಿ ಕಾಕ್ ಕೂಡ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ನಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗದೆ 15 ರನ್ ಗಳಿಸಿ ಔಟಾದರು. ರಿಂಕು ಸಿಂಗ್ ಮತ್ತು ಆಂಡ್ರೆ ರಸೆಲ್ ಅವರನ್ನು ಹೈದರಾಬಾದ್ ಬೌಲರ್ ಹರ್ಷ್ ದುಬೆ ಎರಡು ಸತತ ಎಸೆತಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ರಿಂಕು 9 ರನ್ ಗಳಿಸಿದರೆ, ರಸೆಲ್ ಗೋಲ್ಡನ್ ಡಕ್ ಆಗಿ ಔಟಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಂಗ್ಕ್ರಿಶ್ ರಘುವಂಶಿ ಕೂಡ ಕೇವಲ 14 ರನ್ ಗಳಿಸಿ ನಿರ್ಗಮಿಸಿದರು.

IPL 2025: 37 ಎಸೆತಗಳಲ್ಲಿ ಶತಕ ಸಿಡಿಸಿದ ಹೆನ್ರಿಕ್ ಕ್ಲಾಸೆನ್

ಮನೀಶ್- ರಾಣಾ ಹೋರಾಟ

ಹೀಗಾಗಿ 110 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕೆಕೆಆರ್​ನ ಸೋಲು ಖಚಿತವಾಗಿತ್ತು. ಆದರೆ ಕೊನೆಯಲ್ಲಿ ಮನೀಶ್ ಪಾಂಡೆ ಮತ್ತು ಹರ್ಷಿತ್ ರಾಣಾ ಕೊಂಚ ಪ್ರತಿರೋಧ ತೋರಿದರು. 22 ಎಸೆತಗಳನ್ನು ಎದುರಿಸಿದ ಮನೀಷ್ 2 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 37 ರನ್ ಗಳಿಸಿದರೆ, ಹರ್ಷಿತ್ ರಾಣಾ 21 ಎಸೆತಗಳಲ್ಲಿ 34 ರನ್ ಗಳಿಸಿದರು. ಅಂತಿಮವಾಗಿ ಕೆಕೆಆರ್ 168 ರನ್‌ಗಳಿಗೆ ಆಲೌಟ್ ಆಯಿತು. ಸನ್‌ರೈಸರ್ಸ್ ಹೈದರಾಬಾದ್ ಪರ ಜಯದೇವ್ ಉನಾದ್ಕಟ್, ಹರ್ಷ್ ದುಬೆ ಮತ್ತು ಇಶಾನ್ ಮಾಲಿಂಗ ತಲಾ ಮೂರು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:20 pm, Sun, 25 May 25