ಜುಲೈ 31 ರಂದು ನಡೆದ ಬಿಸಿಸಿಐ ಜೊತೆಗಿನ ಐಪಿಎಲ್ ಮಾಲೀಕರ ಸಭೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಓನರ್ ಶಾರುಖ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲೀಕ ನೆಸ್ ವಾಡಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಟಗಾರರ ರಿಟೈನ್ ನಿಯಮಕ್ಕೆ ಸಂಬಂಧಿಸಿದಂತೆ ಇಬ್ಬರು ವಾಕ್ಸಮರ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹೆಚ್ಚಿನ ಆಟಗಾರರ ರಿಟೈನ್ಗಾಗಿ ಬೇಡಿಕೆಯಿಟ್ಟಿದ್ದು, ಈ ವೇಳೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಶಾರುಖ್ ಖಾನ್ ಹಾಗೂ ನೆಸ್ ವಾಡಿಯಾ ನಡುವೆ ವಾಗ್ವಾದ ಉಂಟಾಗಿದ್ದು, ಇಬ್ಬರು ಏರುಧ್ವನಿಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮೆಗಾ ಹರಾಜಿಗೂ ಮುನ್ನ ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಈ ಹಿಂದೆಯೇ ಕೆಕೆಆರ್ ಫ್ರಾಂಚೈಸಿ ಬಿಸಿಸಿಐಗೆ ಮನವಿ ಮಾಡಿತ್ತು. ಇದಕ್ಕೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಬೆಂಬಲ ವ್ಯಕ್ತಪಡಿಸಿದೆ. ಆದರೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದೆಂಬ ವಾದವನ್ನು ಮುಂದಿಟ್ಟಿದ್ದಾರೆ.
ಕೆಲ ಮೂಲಗಳ ಮಾಹಿತಿ ಪ್ರಕಾರ, ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹೆಚ್ಚಿನ ಆಟಗಾರರ ರಿಟೈನ್ಗೆ ಅವಕಾಶ ನೀಡದಿದ್ದರೆ, 8 ಆಟಗಾರರ ಮೇಲೆ ಆರ್ಟಿಎಂ ಕಾರ್ಡ್ ಬಳಸಲು ಅವಕಾಶ ನೀಡುವಂತೆ ಕೋರಿದೆ. ಆದರೆ ಪಂಜಾಬ್ ಕಿಂಗ್ಸ್ 3 ರಿಂದ 4 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಿದರೆ ಸಾಕು ಎಂದು ತಿಳಿಸಿದೆ.
ಕೆಕೆಆರ್ ಸೇರಿದಂತೆ ಕೆಲ ಫ್ರಾಂಚೈಸಿಗಳು ತಮ್ಮ ಬ್ರ್ಯಾಂಡಿಂಗ್ ಅನ್ನು ಉಳಿಸಿಕೊಳ್ಳಲು ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಬಯಸುತ್ತಿದೆ. ಆದರೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಈ ಆಯ್ಕೆ ನೀಡಬಾರದೆಂದು ಮನವಿ ಮಾಡಿದ್ದು, ಇದರಿಂದ ಶಾರುಖ್ ಖಾನ್ ಕೋಪಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: IPL 2025: RCB ತಂಡದಿಂದ ಗ್ಲೆನ್ ಮ್ಯಾಕ್ಸ್ವೆಲ್ ಔಟ್?
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ತಮ್ಮ ವಾದವನ್ನು ಮುಂದಿಡುತ್ತಿದ್ದಂತೆ ನೆಸ್ ವಾಡಿಯಾ ಅವರೊಂದಿಗೆ ಶಾರುಖ್ ತೀವ್ರ ವಾಗ್ವಾದ ನಡೆಸಿದ್ದಾರೆ. ಇದೇ ವೇಳೆ ಮಧ್ಯೆ ಪ್ರವೇಶಿಸಿದ ಐಪಿಎಲ್ ಗವರ್ನರ್ ಕೌನ್ಸಿಲ್ನ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಭೆಯನ್ನು ಮುಂದುವರೆಸಿದ್ದಾರೆ.