
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿಗೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಅದಕ್ಕೂ ಮುನ್ನ ಐಪಿಎಲ್ 2026 ರಲ್ಲಿ ತನ್ನ ರೋಲ್ ಏನು ಎಂಬುದನ್ನು ಆಸ್ಟ್ರೇಲಿಯಾ ಆಟಗಾರ ಕ್ಯಾಮರೋನ್ ಗ್ರೀನ್ ಸ್ಪಷ್ಟಪಡಿಸಿದ್ದಾರೆ. ಹೀಗೆ ಸ್ಪಷ್ಟನೆ ಕೊಡಲು ಮುಖ್ಯ ಕಾರಣ ಐಪಿಎಲ್ ಹರಾಜು ಪಟ್ಟಿಯಲ್ಲಿ ಆಗಿರುವ ಸಣ್ಣ ಎಡವಟ್ಟು.
ಐಪಿಎಲ್ ಹರಾಜಿಗಾಗಿ ಶಾರ್ಟ್ ಲಿಸ್ಟ್ ಮಾಡಲಾದ 350 ಆಟಗಾರರ ಪಟ್ಟಿಯಲ್ಲಿ ಕ್ಯಾಮರೋನ್ ಗ್ರೀನ್ ಬ್ಯಾಟರ್ ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಅವರ ಹೆಸರು ಪ್ರಮುಖ ಆಲ್ರೌಂಡರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದಾಗಿ ಈ ಬಾರಿ ಗ್ರೀನ್ ಬೌಲಿಂಗ್ ಮಾಡಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.
ಇದೀಗ ತಾನು ಬೌಲಿಂಗ್ ಮಾಡಲು ಸಂಪೂರ್ಣ ಫಿಟ್ ಆಗಿದ್ದೇನೆ ಎಂದು ಕ್ಯಾಮರೋನ್ ಗ್ರೀನ್ ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್ ಹರಾಜು ಪಟ್ಟಿಯಲ್ಲಿ ನನ್ನ ಹೆಸರು ಬ್ಯಾಟರ್ಗಳ ಪಟ್ಟಿಯಲ್ಲಿ ಬರಲು ಮುಖ್ಯ ಕಾರಣ ಮ್ಯಾನೇಜರ್. ಅವರು ಮಾಡಿದ ಸಣ್ಣ ತಪ್ಪಿನಿಂದಾಗಿ ನನ್ನ ಹೆಸರು ಆಲ್ರೌಂಡರ್ಗಳ ಲಿಸ್ಟ್ನಲ್ಲಿ ಕಾಣಿಸಿಕೊಂಡಿಲ್ಲ ಅಷ್ಟೇ.
ಇದಾಗ್ಯೂ ನಾನು ಬೌಲಿಂಗ್ ಮಾಡಬಲ್ಲೆ. ಪ್ರತಿ ಪಂದ್ಯದಲ್ಲೂ ಬೌಲಿಂಗ್ ಮಾಡುವಷ್ಟು ಫಿಟ್ನೆಸ್ ಹೊಂದಿದ್ದೇನೆ. ಮ್ಯಾನೇಜರ್ ಹರಾಜು ಪಟ್ಟಿಯಲ್ಲಿ ಬಾಕ್ಸ್ ಟಿಕ್ ಮಾಡುವಾಗ ನನ್ನನ್ನು ಬ್ಯಾಟರ್ ಎಂದು ಹೆಸರಿಸಿದ್ದಾರೆ. ಹೀಗಾಗಿಯೇ ಗೊಂದಲ ಏರ್ಪಟ್ಟಿದೆ ಎಂದು ಕ್ಯಾಮರೋನ್ ಗ್ರೀನ್ ಹೇಳಿದ್ದಾರೆ.
ಸದ್ಯ ನಾನು ಸಂಪೂರ್ಣ ಫಿಟ್ನೆಸ್ ಹೊಂದಿದ್ದು, ಉತ್ತಮವಾಗಿ ಬೌಲಿಂಗ್ ಕೂಡ ಮಾಡುತ್ತಿದ್ದೇನೆ. ಅದರಂತೆ ಮುಂಬರುವ ಐಪಿಎಲ್ನಲ್ಲಿ ಆಲ್ರೌಂಡರ್ ಆಗಿ ಕಣಕ್ಕಿಳಿಯುವ ಇಂಗಿತದಲ್ಲಿದ್ದೇನೆ ಎಂದು ಗ್ರೀನ್ ತಿಳಿಸಿದ್ದಾರೆ.
ಕ್ಯಾಮರೋನ್ ಗ್ರೀನ್ ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಆದರೆ ಫಿಟ್ನೆಸ್ ಸಮಸ್ಯೆಯ ಕಾರಣ ಅವರು ಐಪಿಎಲ್ 2025 ರಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮತ್ತೆ ರಂಗು ರಂಗಿನ ಕ್ರಿಕೆಟ್ ಟೂರ್ನಿಗೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ.
ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಕ್ಯಾಮರೋನ್ ಗ್ರೀನ್ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ಹೊಂದಿದೆ. ಏಕೆಂದರೆ ಕೆಕೆಆರ್ ತಂಡದಲ್ಲಿದ್ದ ಆಲ್ರೌಂಡರ್ ಆ್ಯಂಡ್ರೆ ರಸೆಲ್ ನಿವೃತ್ತಿ ಘೋಷಿಸಿದ್ದಾರೆ. ಇತ್ತ ಸಿಎಸ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ಗೆ ನೀಡಿದ್ದಾರೆ.
ಇದನ್ನೂ ಓದಿ: IPL 2026: ಕೊನೆಗೂ RCB ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್
ಹೀಗಾಗಿ ಈ ಎರಡು ಫ್ರಾಂಚೈಸಿಗಳು ಕ್ಯಾಮರೋನ್ ಗ್ರೀನ್ಗಾಗಿ ಪೈಪೋಟಿ ನಡೆಸುವುದು ಖಚಿತ. ಅಂತಿಮವಾಗಿ ಗ್ರೀನ್ ಅವರನ್ನು ಯಾವ ಫ್ರಾಂಚೈಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬುದನ್ನು ತಿಳಿಯಲು ಡಿಸೆಂಬರ್ 16 ರವರೆಗೆ ಕಾಯಲೇಬೇಕು.