
2026 ರ ಐಪಿಎಲ್ಗೆ (IPL 2026) ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಂದ ತಯಾರಿ ಶುರುವಾಗಿದೆ. ಇತ್ತ ಬಿಸಿಸಿಐ (BCCI) ಕೂಡ ಮುಂಬರುವ ಐಪಿಎಲ್ಗೂ ಮುನ್ನ ನಡೆಯಬೇಕಾಗಿರುವ ಮಿನಿ ಹರಾಜಿಗೆ (IPL 2026 mini auction) ದಿನಾಂಕ ನಿಗದಿಪಡಿಸಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಐಪಿಎಲ್ 2026 ರ ಮಿನಿ ಹರಾಜು ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹರಾಜು ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಬಹುದು. ಡಿಸೆಂಬರ್ 13 ಮತ್ತು 15 ರ ನಡುವೆ ಹರಾಜು ನಡೆಯುವ ಸಾಧ್ಯತೆಯಿದೆ. ಹೀಗಾಗಿ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಹಾಗೂ ತಂಡದಿಂದ ಬಿಡುಗಡೆ ಮಾಡಲು ನವೆಂಬರ್ 15 ರವರೆಗೆ ಸಮಯಾವಕಾಶವಿರಲಿದೆ.
ಈಗ ಪ್ರಶ್ನೆ ಏನೆಂದರೆ, ಮುಂದಿನ ಐಪಿಎಲ್ ಮಿನಿ ಹರಾಜು ಎಲ್ಲಿ ನಡೆಯುತ್ತದೆ?. ಕ್ರಿಕ್‌ಬಜ್ ಪ್ರಕಾರ, ಕಳೆದ ಎರಡು ಆವೃತ್ತಿಗಳಂತೆ ಮಿನಿ ಹರಾಜು ಭಾರತದಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತದೆಯೇ ಎಂಬುದರ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ. ಐಪಿಎಲ್ 2023 ರ ಹರಾಜು ದುಬೈನಲ್ಲಿ ನಡೆದಿತ್ತು. ಹಾಗೆಯೇ 2024 ರ ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಫ್ರಾಂಚೈಸಿಗಳಿಗೆ ಹತ್ತಿರವಿರುವ ಮೂಲಗಳನ್ನು ಉಲ್ಲೇಖಿಸಿ, ಬಿಸಿಸಿಐ ಈ ಬಾರಿ ಭಾರತದಲ್ಲಿ ಮಿನಿ-ಹರಾಜನ್ನು ನಡೆಸಿದರೆ ಆಶ್ಚರ್ಯವೇನಿಲ್ಲ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ಬಗ್ಗೆ ನಿರ್ಧಾರ ಇನ್ನೂ ಬಾಕಿ ಇದೆ.
ಐಪಿಎಲ್ 2026 ರ ಮಿನಿ ಹರಾಜಿನ ಮೊದಲು ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನಾಂಕವಾಗಿ ನವೆಂಬರ್ 15 ಅನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಈ ದಿನಾಂಕದೊಳಗೆ ತಾವು ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ವರದಿಗಳ ಪ್ರಕಾರ, ಚೆನ್ನೈ ಮತ್ತು ರಾಜಸ್ಥಾನ ಹೊರತುಪಡಿಸಿ, ಉಳಿದ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಇದೆ.
IPL 2026: ಪೃಥ್ವಿ ಶಾ ಖರೀದಿಗೆ ಮೂರು ಐಪಿಎಲ್ ಫ್ರಾಂಚೈಸಿಗಳಿಂದ ತಯಾರಿ
ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಬಿಡುಗಡೆಯಾಗುವ ಆಟಗಾರರ ಪಟ್ಟಿಯಲ್ಲಿ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್ ಮತ್ತು ಡೆವೊನ್ ಕಾನ್ವೇ ಸೇರಿದ್ದಾರೆ. ಇದಲ್ಲದೆ, ಅಶ್ವಿನ್ ನಿವೃತ್ತಿಯಿಂದ ಅವರ ಪರ್ಸ್‌ನಲ್ಲಿ ಗಮನಾರ್ಹ ಪ್ರಮಾಣದ ಹಣ ಉಳಿಯುತ್ತದೆ. ಏತನ್ಮಧ್ಯೆ, ರಾಜಸ್ಥಾನ ರಾಯಲ್ಸ್ ತಂಡವು ವನಿಂದು ಹಸರಂಗ ಮತ್ತು ಮಹೇಶ್ ತೀಕ್ಷಣ ಅವರಂತಹ ಸ್ಪಿನ್ನರ್‌ಗಳನ್ನು ಬಿಡುಗಡೆ ಮಾಡಬಹುದು. ಇದಲ್ಲದೆ, ಸಂಜು ಸ್ಯಾಮ್ಸನ್ ಮುಂದಿನ ಆವೃತ್ತಿಯಲ್ಲಿ ಬೇರೆ ತಂಡದ ಪರ ಆಡುವ ಇರಾದೆಯಲಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Fri, 10 October 25