IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ- ಎಸ್​ಆರ್​ಹೆಚ್

IPL 2026: 2026ರ ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳಿಗೆ ದೊಡ್ಡ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೇಜಲ್‌ವುಡ್ ಮಾರ್ಚ್ 28 ರಂದು ನಡೆಯುವ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಟಿ20 ವಿಶ್ವಕಪ್‌ನಿಂದಲೂ ಹೊರಬಿದ್ದಿದ್ದ ಈ ಸ್ಟಾರ್ ಆಟಗಾರರ ಅಲಭ್ಯತೆ ಉಭಯ ತಂಡಗಳ ತಂತ್ರಗಾರಿಕೆ ಮತ್ತು ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು.

IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ- ಎಸ್​ಆರ್​ಹೆಚ್
Rcb Vs Srh

Updated on: Mar 12, 2026 | 10:39 PM

2026 ರ ಐಪಿಎಲ್ ವೇಳಾಪಟ್ಟಿಯ (IPL 2026 schedule) ಮೊದಲ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 28 ರಂದು ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುಂಚೆಯೇ ಎರಡೂ ತಂಡಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿವೆ. ವಾಸ್ತವವಾಗಿ, ಎರಡೂ ತಂಡಗಳ ಇಬ್ಬರು ಸ್ಟಾರ್ ಆಟಗಾರರು ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ. ಗಾಯಗಳಿಂದ ಬಳಲುತ್ತಿರುವ ಮತ್ತು ಇನ್ನೂ ಫಿಟ್‌ನೆಸ್ ಮರಳಿ ಪಡೆಯದ ಜೋಶ್ ಹೇಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಉದ್ಘಾಟನಾ ಪಂದ್ಯದಲ್ಲಿ ಆಡುವುದು ಅನುಮಾನ. ಪ್ಯಾಟ್ ಕಮ್ಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರೆ, ಜೋಶ್ ಹೇಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಜೀವಾಳವಾಗಿದ್ದಾರೆ. ಹೀಗಾಗಿ ಇವರಿಬ್ಬರ ಅಲಭ್ಯತೆ ಎರಡೂ ತಂಡಗಳಿಗೆ ದೊಡ್ಡ ತಲೆನೋವಾಗಿದೆ.

ಪ್ಯಾಟ್ ಕಮ್ಮಿನ್ಸ್-ಹೇಜಲ್‌ವುಡ್ ಡೌಟ್

ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೇಜಲ್‌ವುಡ್ ಗಾಯದ ಕಾರಣದಿಂದಾಗಿ 2026 ರ ಟಿ20 ವಿಶ್ವಕಪ್​ನಿಂದಲೂ ಹೊರಬಿದಿದ್ದರು. ಇದೀಗ ಇವರಿಬ್ಬರು ಐಪಿಎಲ್ 2026 ರ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ವರದಿಯಾಗಿದೆ. ಇಬ್ಬರೂ ಆಟಗಾರರು ಇನ್ನೂ ಚೇತರಿಕೆಯ ಹಾದಿಯಲಿದ್ದು, ವೈದ್ಯಕೀಯ ಅನುಮತಿ ಪಡೆದ ನಂತರವೇ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಪ್ಯಾಟ್ ಕಮ್ಮಿನ್ಸ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಜುಲೈ 2025 ರ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಈ ಗಾಯಕ್ಕೆ ತುತ್ತಾದ ಕಮ್ಮಿನ್ಸ್, ಇದರಿಂದಾಗಿ ಆಶಸ್ ಸರಣಿಯ ಆರಂಭಿಕ ಪಂದ್ಯಗಳಿಂದ ಹೊರಬಿದ್ದರು. ಆದರೆ ಅವರ ಚೇತರಿಕೆ ಪೂರ್ಣಗೊಳ್ಳದ ಕಾರಣ ಅವರನ್ನು 2026 ರ ಟಿ20 ವಿಶ್ವಕಪ್‌ನಿಂದಲೂ ಹೊರಗಿಡಲಾಯಿತು. ಇನ್ನು ವೇಗಿ ಹೇಜಲ್‌ವುಡ್ ಮಂಡಿರಜ್ಜು ಗಾಯ ಮತ್ತು ಅಕಿಲೀಸ್ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದಾರೆ. ನವೆಂಬರ್ 2025 ರಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯದ ಸಮಯದಲ್ಲಿ ಹೇಜಲ್‌ವುಡ್ ಈ ಗಾಯಕ್ಕೆ ತುತ್ತಾದರು. ಇದರಿಂದಾಗಿ ಅವರು ಆಶಸ್‌ ಸರಣಿಯಿಂದಲೂ ಹೊರಗುಳಿದರು. ಅವರ ಚೇತರಿಕೆ ನಿಧಾನವಾಗಿದ್ದರಿಂದ 2026 ರ ಟಿ20 ವಿಶ್ವಕಪ್‌ನಿಂದಲೂ ಅವರನ್ನು ಹೊರಗಿಡಲಾಯಿತು.

IPL 2026: 6 ಉದ್ಘಾಟನಾ ಪಂದ್ಯಗಳನ್ನಾಡಿರುವ ಆರ್​ಸಿಬಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

ಕಮ್ಮಿನ್ಸ್-ಹೇಜಲ್‌ವುಡ್ ಐಪಿಎಲ್ ಪ್ರದರ್ಶನ

ಪ್ಯಾಟ್ ಕಮ್ಮಿನ್ಸ್ 72 ಐಪಿಎಲ್ ಪಂದ್ಯಗಳಲ್ಲಿ ಪ್ರತಿ ಓವರ್‌ಗೆ 8.8 ರನ್‌ಗಳ ಎಕಾನಮಿ ದರದೊಂದಿಗೆ 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ವರ್ಷ 14 ಪಂದ್ಯಗಳನ್ನಾಡಿದ ಕಮ್ಮಿನ್ಸ್ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಇತ್ತ ಹೇಜಲ್‌ವುಡ್ 39 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಹೇಜಲ್​ವುಡ್ ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಈ ಪ್ರದರ್ಶನವು ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us