
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ 2026 (IPL 2026) ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ನಡುವೆ ನಡೆಯಿತು. ಇದು ಈ ಆವೃತ್ತಿಯಲ್ಲಿ ಎರಡು ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯ ಆರ್‌ಸಿಬಿ ಪಾಲಿಗೆ ಸೇಡಿನ ಸಮರವಾಗಿತ್ತು. ಈ ಸೇಡಿನ ಸಮರದಲ್ಲಿ ಡೆಲ್ಲಿ ತಂಡವನ್ನು ಅವರ ನೆಲದಲ್ಲಿ ಹೀನಾಯವಾಗಿ ಮಣಿಸಿದ ಆರ್‌ಸಿಬಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಜೊತೆಗೆ ಲೀಗ್ನಲ್ಲಿ ತನ್ನ 6ನೇ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೇವಲ 1 ವಿಕೆಟ್ ಕಳೆದುಕೊಂಡು 6.3 ಓವರ್‌ಗಳಲ್ಲಿ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ಗಳು ಮೊದಲ ಓವರ್‌ನ ಎರಡನೇ ಎಸೆತದಿಂದಲೇ ತರಗೆಲೆಗಳಂತೆ ಉದುರಲು ಆರಂಭಿಸಿದವು. ಭುವನೇಶ್ವರ್ ಕುಮಾರ್ ಎಸೆದ ಎರಡನೇ ಎಸೆತದಲ್ಲಿ ಸಾಹಿಲ್ ಪರಾಖ್ 0 ರನ್ ಗಳಿಸಿ ಔಟಾದರು. ನಂತರ, ಮುಂದಿನ ಓವರ್‌ನಲ್ಲಿ ಹೇಜಲ್‌ವುಡ್ ಕೆಎಲ್ ರಾಹುಲ್ ಅವರನ್ನು 1 ರನ್‌ಗೆ ಔಟ್ ಮಾಡಿದರು. ಸಮೀರ್ ರಿಜ್ವಿ ಮುಂದಿನ ಎಸೆತದಲ್ಲಿಯೇ ಶೂನ್ಯಕ್ಕೆ ಔಟ್ ಆದರು. ನಂತರ ಭುವನೇಶ್ವರ್ ಕುಮಾರ್ ಒಂದೇ ಓವರ್‌ನಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಅವರನ್ನು ಔಟ್ ಮಾಡಿದರು.
ಸ್ವಲ್ಪ ಸಮಯದೊಳಗೆ ಡೆಲ್ಲಿ ಕೇವಲ 8 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಭಿಷೇಕ್ ಪೊರೆಲ್ (30) ಮತ್ತು ಡೇವಿಡ್ ಮಿಲ್ಲರ್ (18) ಎರಡಂಕಿ ಮೊತ್ತ ಕಲೆಹಾಕುವ ಮೂಲಕ ತಂಡವನ್ನು 75 ರನ್‌ಗಳಿಗೆ ಕೊಂಡೊಯ್ದರು. ಆರ್‌ಸಿಬಿ ಪರ ಮಾರಕ ದಾಳಿ ನಡೆಸಿದ ಜೋಶ್ ಹೇಜಲ್‌ವುಡ್ ಕೇವಲ 12 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರೆ, ಭುವನೇಶ್ವರ್ ಕುಮಾರ್ 3 ಓವರ್‌ಗಳಲ್ಲಿ ಕೇವಲ 5 ರನ್‌ಗಳಿಗೆ 3 ವಿಕೆಟ್ ಪಡೆದರು. ಉಳಿದಂತೆ ಸುಯಾಶ್ ಶರ್ಮಾ 7 ರನ್‌ಗಳಿಗೆ 1 ವಿಕೆಟ್, ಕೃನಾಲ್ ಮತ್ತು ರಸಿಕ್ ಸಲಾಂ ಕೂಡ ತಲಾ 1 ವಿಕೆಟ್ ಪಡೆದರು.
DC vs RCB IPL 2026 Highlights: ಡೆಲ್ಲಿ ವಿರುದ್ಧ ಆರ್ಸಿಬಿಗೆ ಏಕಪಕ್ಷೀಯ ಜಯ
ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಅತಿದೊಡ್ಡ ಗೆಲುವು ದಾಖಲಿಸಿತು. ಆರ್‌ಸಿಬಿ ಕೇವಲ 39 ಎಸೆತಗಳಲ್ಲಿ ಗುರಿ ಸಾಧಿಸಿದ್ದು ಇದೇ ಮೊದಲು. ಏತನ್ಮಧ್ಯೆ, ದೆಹಲಿ ಮೊದಲ ಬಾರಿಗೆ ಇಷ್ಟು ಹೀನಾಯವಾಗಿ ಸೋತಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಉಳಿದಿದ್ದರೂ, ನೆಟ್ ರನ್ ರೇಟ್ನಲ್ಲಿ ಭಾರಿ ಏರಿಕೆ ಕಂಡಿದೆ. ಆರ್‌ಸಿಬಿ ಆಡಿರುವ ಎಂಟು ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಪಂಜಾಬ್ 13 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಒಂದು ಪಂದ್ಯವನ್ನು ಸೋಲದ ಏಕೈಕ ತಂಡ ಪಂಜಾಬ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Mon, 27 April 26