
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ (Mumbai Indians) ಐಪಿಎಲ್ 2026 (IPL 2026) ಸೀಸನ್ ಉತ್ತಮವಾಗಿ ಆರಂಭವಾಗಿಲ್ಲ. ಮೊದಲ ಪಂದ್ಯವನ್ನು ಗೆದ್ದ ನಂತರ, ಸತತ ಮೂರು ಪಂದ್ಯಗಳನ್ನು ಸೋತಿದೆ. ಇದು ಹಾರ್ದಿಕ್ ಪಾಂಡ್ಯ ತಂಡವನ್ನು ಚಿಂತೆಗೀಡುಮಾಡಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಐದನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಮುಂಬೈ ತಂಡವಿದೆ. ಆದರೆ ಇದಕ್ಕೆ ಹಿನ್ನಡೆ ಎಂಬಂತೆ ತಂಡದ ಸ್ಟಾರ್ ಆರಂಭಿಕ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಗಾಯಗೊಂಡಿರುವ ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಲ್ಲದೆ ಅವರು ಕನಿಷ್ಠ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬುದನ್ನು ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರೇ ಹೇಳಿದ್ದಾರೆ.
ಏಪ್ರಿಲ್ 16 ರ ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರೋಹಿತ್ ಅವರ ಫಿಟ್ನೆಸ್ ಪ್ರಮುಖ ಚರ್ಚೆಯ ವಿಷಯವಾಗಿತ್ತು. ಇದೇ ಮೈದಾನದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ ಮಾಡುವಾಗ ರೋಹಿತ್ ಶರ್ಮಾ ಮಂಡಿರಜ್ಜು ಗಾಯಕ್ಕೆ ಒಳಗಾದರು. ಹೀಗಾಗಿ ಮಧ್ಯದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದ ರೋಹಿತ್, ಮತ್ತೆ ಬ್ಯಾಟಿಂಗ್‌ಗೆ ಹಿಂತಿರುಗಲಿಲ್ಲ. ಆ ಸಮಯದಲ್ಲಿ, ರೋಹಿತ್ ಕೇವಲ 13 ಎಸೆತಗಳಲ್ಲಿ 19 ರನ್ ಗಳಿಸಿದ್ದರು.
ಈ ಪಂದ್ಯದ ನಂತರ, ರೋಹಿತ್ ಅವರ ಫಿಟ್ನೆಸ್ ಬಗ್ಗೆ ಮತ್ತು ಅವರು ಪಂಜಾಬ್ ವಿರುದ್ಧ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿದ್ದವು. ರೋಹಿತ್ ನಿಯಮಿತವಾಗಿ ಅಭ್ಯಾಸದಲ್ಲಿ ಭಾಗವಹಿಸಿದ್ದು ಸ್ವಲ್ಪ ಭರವಸೆ ಮೂಡಿಸಿತ್ತು. ಆದಾಗ್ಯೂ, ಟಾಸ್ ಸಮಯದಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಕೆಟ್ಟ ಸುದ್ದಿಯನ್ನು ನೀಡಿದರು. ರೋಹಿತ್ ಈ ಪಂದ್ಯದ ಭಾಗವಾಗಿರುವುದಿಲ್ಲ. ಅಷ್ಟೇ ಅಲ್ಲ, ಅವರು ಕನಿಷ್ಠ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಮತ್ತು ಅವರ ಫಿಟ್ನೆಸ್ ಪರೀಕ್ಷೆಯ ನಂತರವೇ ಅವರ ಭಾಗವಹಿಸುವಿಕೆಯ ಕುರಿತು ಯಾವುದೇ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಾಂಡ್ಯ ಹೇಳಿದ್ದಾರೆ. ಇದರರ್ಥ ಪಂಜಾಬ್ ನಂತರ, ಏಪ್ರಿಲ್ 20 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದಲೂ ರೋಹಿತ್ ಹೊರಗುಳಿಯಲಿದ್ದಾರೆ ಎಂಬುದು ಖಚಿತವಾಗಿದೆ.
MI vs PBKS: ಟಾಸ್ ಗೆದ್ದ ಪಂಜಾಬ್; ರೋಹಿತ್ ಸೇರಿದಂತೆ ಮುಂಬೈ ತಂಡದಲ್ಲಿ 2 ಬದಲಾವಣೆ
ರೋಹಿತ್ ಮಾತ್ರವಲ್ಲ, ಸ್ಪಿನ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಕೂಡ ಗಾಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬೈ ಕ್ವಿಂಟನ್ ಡಿ ಕಾಕ್ ಮತ್ತು ದೆಹಲಿಯ ಯುವ ಬ್ಯಾಟಿಂಗ್ ಆಲ್‌ರೌಂಡರ್ ಮಯಾಂಕ್ ರಾವತ್‌ಗೆ ಅವಕಾಶ ನೀಡಿದೆ. ಇದು ಮಯಾಂಕ್ ರಾವತ್ ಅವರ ಐಪಿಎಲ್ ಚೊಚ್ಚಲ ಪಂದ್ಯವಾಗಲಿದೆ. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸಾಕಷ್ಟು ಖ್ಯಾತಿ ಗಳಿಸಿದ್ದ ಮಯಾಂಕ್ ರಾವತ್ ಅಂತಿಮ ಪಂದ್ಯದಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದರು. ಅಲ್ಲದೆ ಐಪಿಎಲ್ ತಂಡದ ಟ್ರಯಲ್‌ನಲ್ಲಿಯೂ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು, ಆದರೆ ಆಗ ಯಾರೂ ಅವರನ್ನು ಖರೀದಿಸಿರಲಿಲ್ಲ. ಆದರೆ ಈ ಬಾರಿ, ಮಯಾಂಕ್ ಅವರನ್ನು ಹರಾಜಿನಲ್ಲಿಯೇ ಮುಂಬೈ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ