
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದಾಗ್ಯೂ ಐಪಿಎಲ್ನ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಲ ರಾಜ್ಯಗಳಲ್ಲಿನ ಚುನಾವಣೆ. ಮುಂಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ವೇಳಾಪಟ್ಟಿಗೆ ದಿನಾಂಕ ನಿಗದಿ ಮಾಡಲು ಸಮಸ್ಯೆ ಎದುರಾಗಿದೆ. ಹೀಗಾಗಿ ಐಪಿಎಲ್ ಆರಂಭಿಸಲು ಮೊದಲು 15 ದಿನಗಳ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಚಿಂತಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಾರ್ಚ್ 28 ರಿಂದ ಶುರುವಾಗಲಿದೆ. ಇದಕ್ಕಾಗಿ ಮೊದಲಿಗೆ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ಸಮಯದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮತದಾನದ ಕರ್ತವ್ಯದಲ್ಲಿ ಇರುತ್ತಾರೆ. ಇದರಿಂದಾಗಿ ಪಂದ್ಯಗಳಿಗೆ ಅಗತ್ಯವಿರುವ ಹೆಚ್ಚಿನ ಭದ್ರತೆಯನ್ನು ಒದಗಿಸುವುದು ಕಷ್ಟವಾಗುತ್ತದೆ.
ಭಾರತೀಯ ಚುನಾವಣಾ ಆಯೋಗವು ಈ ರಾಜ್ಯಗಳ ಮತದಾನದ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ದಿನಾಂಕಗಳು ತಿಳಿದ ನಂತರವಷ್ಟೇ ಪಂದ್ಯಗಳ ಸ್ಥಳ ಮತ್ತು ಸಮಯವನ್ನು ಬಿಸಿಸಿಐ ಖಚಿತಪಡಿಸಿಕೊಳ್ಳಲು ಸಾಧ್ಯ.
ಬಿಸಿಸಿಐ ಈ ಹಿಂದೆಯೂ (ಉದಾಹರಣೆಗೆ 2024 ಮತ್ತು 2019 ರಲ್ಲಿ) ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಇದೇ ರೀತಿಯಲ್ಲಿ ಹಂತ-ಹಂತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಇದೀಗ ಕೇವಲ ಮೊದಲ 15 ದಿನಗಳ (ಮಾರ್ಚ್ 28 ರಿಂದ ಏಪ್ರಿಲ್ ಮಧ್ಯಭಾಗದವರೆಗೆ) ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲು ಬಿಸಿಸಿಐ ಚಿಂತಿಸಿದೆ. ಉಳಿದ ಪಂದ್ಯಗಳ ಪಟ್ಟಿಯು ಮಾರ್ಚ್ ತಿಂಗಳ ಅಂತ್ಯದೊಳಗೆ ಹೊರಬರುವ ನಿರೀಕ್ಷೆಯಿದೆ.
ಈ ಬಾರಿಯ ಐಪಿಎಲ್ನ ಉದ್ಘಾಟನಾ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಅಥವಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.
ಪ್ರಸ್ತುತ ಮಾಹಿತಿಯಂತೆ ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ. ಈ ಪಂದ್ಯವನ್ನೂ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ಚಿಂತಿಸಲಾಗಿದೆ.
ಇದನ್ನೂ ಓದಿ: ಅಬ್ಬಾ ಇಷ್ಟೊಂದಾ! ಟೀಮ್ ಇಂಡಿಯಾಗೆ ಬಹುಮಾನ ಘೋಷಣೆ
ಅಂದರೆ ಮುಂಬರುವ ಐಪಿಎಲ್ನ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಮ್ಯಾಚ್ಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುವುದು ಬಹುತೇಕ ಖಚಿತವಾಗಿದೆ.
Published On - 3:06 pm, Tue, 10 March 26