ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರೇ ಈಗ ಅನ್‌ಕ್ಯಾಪ್ಡ್; ಐಪಿಎಲ್‌ನ ಈ ನಿಯಮವೇನು?

ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಏಳು ಭಾರತೀಯ ಅಂತಾರಾಷ್ಟ್ರೀಯ ಆಟಗಾರರು 'ಅನ್‌ಕ್ಯಾಪ್ಡ್' ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್‌ನ ವಿಶೇಷ ನಿಯಮದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತದ ಪರ ಆಡದ ಹಾಗೂ ಕೇಂದ್ರ ಗುತ್ತಿಗೆ ಹೊಂದಿರದ ಆಟಗಾರರನ್ನು ಅನ್‌ಕ್ಯಾಪ್ಡ್ ಎಂದು ಪರಿಗಣಿಸಲಾಗುತ್ತದೆ. ಎಂ.ಎಸ್. ಧೋನಿ ಅವರಂತಹ ಆಟಗಾರರು ಈ ನಿಯಮದ ಲಾಭ ಪಡೆದಿದ್ದು, ಫ್ರಾಂಚೈಸಿಗಳಿಗೆ ಗಮನಾರ್ಹ ಉಳಿತಾಯವಾಗಲಿದೆ. ಈ ನಿಯಮದಡಿ ಇಶಾಂತ್ ಶರ್ಮಾ, ನಿತೀಶ್ ರಾಣಾ ಸೇರಿದಂತೆ ಹಲವು ಆಟಗಾರರು ಹರಾಜಿಗೆ ಲಭ್ಯರಿರುವರು.

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರೇ ಈಗ ಅನ್‌ಕ್ಯಾಪ್ಡ್; ಐಪಿಎಲ್‌ನ ಈ ನಿಯಮವೇನು?
ಐಪಿಎಲ್

Updated on: Nov 25, 2026 | 10:39 PM

ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿರುವ ವಿಶೇಷ ಸಂಗತಿಯೆಂದರೆ, ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಏಳು ಆಟಗಾರರು ಈ ಬಾರಿ ಅನ್‌ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರು ಅನ್‌ಕ್ಯಾಪ್ಡ್ ವಿಭಾಗಕ್ಕೆ ಬಂದಿರುವುದರ ಹಿಂದೆ ಐಪಿಎಲ್‌ನ ವಿಶೇಷ ನಿಯಮವಿದೆ. ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರರ ನಿಯಮವನ್ನು 2025ರ ಆವೃತ್ತಿಗೂ ಮುನ್ನ ಮತ್ತೆ ಜಾರಿಗೆ ತರಲಾಗಿತ್ತು. ಈ ನಿಯಮದ ಪ್ರಕಾರ, ಐಪಿಎಲ್‌ನ ಮುಂಬರುವ ಆವೃತ್ತಿಗೂ ಹಿಂದಿನ ಐದು ಕ್ಯಾಲೆಂಡರ್ ವರ್ಷಗಳಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳದ ಹಾಗೂ ಬಿಸಿಸಿಐನ ಕೇಂದ್ರ ಗುತ್ತಿಗೆ ಹೊಂದಿರದ ಭಾರತೀಯ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ. ಈ ನಿಯಮ ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.

ವಾಸ್ತವವಾಗಿ, 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ 2021ರವರೆಗೂ ಈ ನಿಯಮ ಜಾರಿಯಲ್ಲಿತ್ತು. ಆದರೆ ಯಾವುದೇ ಫ್ರಾಂಚೈಸಿ ಇದನ್ನು ಬಳಸಿಕೊಂಡಿರಲಿಲ್ಲ. 2025ರಲ್ಲಿ ಈ ನಿಯಮ ಮತ್ತೆ ಜಾರಿಗೆ ಬಂದ ಬಳಿಕ ಎಂ.ಎಸ್. ಧೋನಿ ಇದಕ್ಕೆ ಪ್ರಮುಖ ಉದಾಹರಣೆಯಾದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ 2022ರಲ್ಲಿ ಧೋನಿಯನ್ನು 12 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಆದರೆ 2025ರ ಆವೃತ್ತಿಯಲ್ಲಿ ಅನ್‌ಕ್ಯಾಪ್ಡ್ ಆಟಗಾರನ ನಿಯಮದಡಿ ಕೇವಲ 4 ಕೋಟಿ ರೂಪಾಯಿಗೆ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಇದೀಗ ಧೋನಿ ಹಾದಿಯನ್ನು ತುಳಿದಿರುವ ಇತರ ಭಾರತೀಯ ಆಟಗಾರರ ಪಟ್ಟಿ ಇಂತಿದೆ.

Loading...

ಇಶಾಂತ್ ಶರ್ಮಾ: ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯ ಬಾರಿಗೆ ನವೆಂಬರ್ 2021ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಐಪಿಎಲ್ 2025ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದ್ದ ಇಶಾಂತ್ ಅವರನ್ನು 75 ಲಕ್ಷ ರೂಪಾಯಿಗೆ ಖರೀದಿಸಲಾಗಿತ್ತು. 2008ರಿಂದ ಇಲ್ಲಿಯವರೆಗೆ 117 ಐಪಿಎಲ್ ಪಂದ್ಯಗಳನ್ನಾಡಿರುವ ಅವರು, 8.38ರ ಎಕಾನಮಿ ದರದಲ್ಲಿ 96 ವಿಕೆಟ್ ಕಬಳಿಸಿದ್ದಾರೆ.

ನಿತೀಶ್ ರಾಣಾ: ಎಡಗೈ ಆಕ್ರಮಣಕಾರಿ ಬ್ಯಾಟರ್ ನಿತೀಶ್ ರಾಣಾ ಕೂಡ ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನಾಗಿ ಹರಾಜಿಗೆ ಇಳಿಯಲಿದ್ದಾರೆ. ಅವರು ಕೊನೆಯ ಬಾರಿಗೆ ಜುಲೈ 2021ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ರಾಣಾ, 9 ಪಂದ್ಯಗಳಲ್ಲಿ 225 ರನ್ ಗಳಿಸಿದ್ದರು. ಒಟ್ಟು 127 ಐಪಿಎಲ್ ಪಂದ್ಯಗಳಲ್ಲಿ 27.73ರ ಸರಾಸರಿಯಲ್ಲಿ 3,078 ರನ್ ಗಳಿಸಿದ್ದು, 22 ಅರ್ಧಶತಕಗಳನ್ನು ಬಾರಿಸಿದ್ದಾರೆ.

ನವದೀಪ್ ಸೈನಿ: ದೆಹಲಿ ಮೂಲದ ವೇಗದ ಬೌಲರ್ ನವದೀಪ್ ಸೈನಿ ಕೂಡ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಅವರು ಕೊನೆಯ ಬಾರಿಗೆ ಜುಲೈ 2021ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಕೊನೆಯದಾಗಿ ಗುರುತಿಸಿಕೊಂಡಿದ್ದ ಸೈನಿಯನ್ನು 2024ರಲ್ಲಿ ಆ ಫ್ರಾಂಚೈಸಿ 2.60 ಕೋಟಿ ರೂಪಾಯಿಗೆ ರಿಟೈನ್ ಮಾಡಿಕೊಂಡಿತ್ತು.

ಚೇತನ್ ಸಕಾರಿಯಾ: ಎಡಗೈ ಯುವ ವೇಗಿ ಚೇತನ್ ಸಕಾರಿಯಾ ಕೂಡ ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ಜುಲೈ 2021ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಐಪಿಎಲ್ 2025ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಗಾಯಗೊಂಡ ಆಟಗಾರನ ಬದಲಿಯಾಗಿ 75 ಲಕ್ಷ ರೂಪಾಯಿಗೆ ತಂಡ ಸೇರಿಕೊಂಡಿದ್ದರು.

ಸಂದೀಪ್ ವಾರಿಯರ್: ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ಸಂದೀಪ್ ವಾರಿಯರ್ ಕೂಡ ಈ ಬಾರಿ ಅನ್‌ಕ್ಯಾಪ್ಡ್ ಆಟಗಾರರ ವಿಭಾಗದಲ್ಲಿ ಹರಾಜಿಗೆ ಬರಲಿದ್ದಾರೆ. ಕಳೆದ ಐದು ವರ್ಷಗಳಿಂದ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಕಾರಣ ಈ ಅವಕಾಶ ಪಡೆದುಕೊಂಡಿದ್ದಾರೆ.

ಮಯಾಂಕ್ ಮಾರ್ಕಂಡೆ: ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಕೂಡ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಭಾರತ ತಂಡದ ಪರ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಐದು ವರ್ಷಗಳ ಹಿಂದೆಯೇ ನಡೆದಿತ್ತು. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಅನ್‌ಕ್ಯಾಪ್ಡ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಂದೀಪ್ ಸಿಂಗ್: ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಮಂದೀಪ್ ಸಿಂಗ್ ಕೂಡ ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನಾಗಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಐದು ವರ್ಷಗಳಿಂದ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಕಾರಣ ಈ ನಿಯಮದ ಲಾಭ ಪಡೆಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us