
ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು ಐಪೊಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮಲ್ಟಿ-ಪ್ಲೇಯರ್ ಟ್ರೇಡ್ (ಆಟಗಾರರ ಅದಲು-ಬದಲು) ನಡೆಸಲು ಮಾತುಕತೆ ನಡೆಸಿವೆ. ವರದಿಗಳ ಪ್ರಕಾರ, ಉಭಯ ತಂಡಗಳು ಈ ಒಪ್ಪಂದಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
ಇದು ಕೇವಲ ಇಬ್ಬರು ಆಟಗಾರರ ನಡುವಿನ ಸಾಮಾನ್ಯ ಟ್ರೇಡ್ ಅಲ್ಲ. ಬದಲಿಗೆ ಒಟ್ಟು ಮೂರರಿಂದ ನಾಲ್ಕು ಆಟಗಾರರು ತಮ್ಮ ಕ್ಯಾಂಪ್‌ಗಳನ್ನು ಬದಲಾಯಿಸಿಕೊಳ್ಳಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಒಬ್ಬ ಬಲಿಷ್ಠ ವೇಗದ ಬೌಲರ್‌ನ ಅಗತ್ಯವಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ತನ್ನ ಬ್ಯಾಟಿಂಗ್ ಲೈನ್‌ಅಪ್ ಬಲಪಡಿಸಲು ಸ್ಟಾರ್ ಬ್ಯಾಟರ್ ಹಾಗೂ ಆಲ್‌ರೌಂಡರ್ ಬೇಕಾಗಿದ್ದಾರೆ. ಹೀಗಾಗಿ ಉಭಯ ತಂಡಗಳು ತಮಗೆ ಬೇಕಾದ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಮುಂದಾಗಿವೆ.
ತಂಡಗಳ ರಹಸ್ಯ ತಂತ್ರಗಾರಿಕೆ ಏನು?
ಕಳೆದ ಸೀಸನ್‌ನಲ್ಲಿ ಲಕ್ನೋ ತಂಡದ ಬೌಲಿಂಗ್ ವಿಭಾಗವು ಅತ್ಯುತ್ತಮ ಎಕಾನಮಿ ರೇಟ್ ಹೊಂದಿತ್ತು. ಮೊಹಮ್ಮದ್ ಶಮಿ ನೇತೃತ್ವದ ವೇಗದ ಬೌಲಿಂಗ್ ಪಡೆ ಬಲಿಷ್ಠವಾಗಿತ್ತಾದರೂ, ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಗಿತ್ತು. ಲಕ್ನೋ ಬ್ಯಾಟರ್‌ಗಳು ಟೂರ್ನಿಯಲ್ಲೇ ಅತ್ಯಂತ ಕಡಿಮೆ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಹೊಂದಿದ್ದರಿಂದ ತಂಡವು ಅಂಕಪಟ್ಟಿಯಲ್ಲಿ ತಳ ಸೇರಿತ್ತು. ಹೀಗಾಗಿ ತನ್ನ ಬೌಲಿಂಗ್ ಬಲದಿಂದ ಒಬ್ಬ ಪ್ರಮುಖ ವೇಗಿಯನ್ನು ಬಿಟ್ಟುಕೊಟ್ಟು, ರಾಜಸ್ಥಾನ್ ತಂಡದಿಂದ ಗುಣಮಟ್ಟದ ಬ್ಯಾಟರ್ ಅಥವಾ ಆಲ್‌ರೌಂಡರ್ ಪಡೆಯಲು ಲಕ್ನೋ ಸೂಪರ್ ಜೈಂಟ್ಸ್ ಉತ್ಸುಕವಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳ ದಂಡೇ ಇದೆ. ಆದರೆ ಮುಂಬರುವ ಸೀಸನ್‌ಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಳೆದ ಬಾರಿ ಅದ್ಭುತ ಪ್ರದರ್ಶನ ನೀಡಿದ ಪ್ರಮುಖ ವೇಗದ ಬೌಲರ್ ಹಾಗೂ ಒಬ್ಬ ಸ್ಪಿನ್ನರ್ ಅನ್ನು ಸೆಳೆಯಲು ರಾಜಸ್ಥಾನ್ ರಾಯಲ್ಸ್ ತೀವ್ರ ಆಸಕ್ತಿ ತೋರಿಸಿದೆ. ಇದಕ್ಕಾಗಿ ತನ್ನಲ್ಲಿರುವ ಒಬ್ಬ ಬ್ಯಾಟರ್ ಮತ್ತು ಆಲ್‌ರೌಂಡರ್ ಅನ್ನು ಬಿಟ್ಟುಕೊಡಲು ಆರ್ಆರ್ ಸಿದ್ಧವಾಗಿದೆ.
ಫ್ರಾಂಚೈಸಿಗಳು ಆಟಗಾರರ ಹೆಸರುಗಳನ್ನು ಸದ್ಯಕ್ಕೆ ಅತ್ಯಂತ ರಹಸ್ಯವಾಗಿಟ್ಟಿವೆ. ಆದಾಗ್ಯೂ, ಲಕ್ನೋದ ಬೌಲಿಂಗ್ ತಾರೆಯರಾದ ಅನುಭವಿ ಮೊಹಮ್ಮದ್ ಶಮಿ ಅಥವಾ ಮೊಹ್ಸಿನ್ ಖಾನ್ ಅಥವಾ ಯುವ ವೇಗಿ ಪ್ರಿನ್ಸ್ ಯಾದವ್ ಅವರಲ್ಲಿ ಒಬ್ಬರು ರಾಜಸ್ಥಾನ್ ರಾಯಲ್ಸ್ ಸೇರಲಿದ್ದಾರೆ ಎಂಬ ಬಲವಾದ ವದಂತಿಗಳಿವೆ.
ಇದನ್ನೂ ಓದಿ: ವರ್ಕ್ ಆದ IPL ಪ್ಲ್ಯಾನ್: ಕೊಹ್ಲಿ ವಿಕೆಟ್ ಪಡೆದ RCB ವೇಗಿ!
ಬಿಸಿಸಿಐ ಆಟಗಾರರ ರಿಟೆನ್ಷನ್ಗೆ ನವೆಂಬರ್ 17ರ ಅಂತಿಮ ಗಡುವನ್ನು ವಿಧಿಸಿದೆ. ಈ ಗಡುವು ಮುಗಿಯುವ ಮುನ್ನವೇ ಈ ಮೆಗಾ ಟ್ರೇಡ್ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಸದ್ಯ ಫ್ರಾಂಚೈಸಿಗಳ ನಡುವಿನ ಮಾತುಕತೆ ಯಶಸ್ವಿಯಾದರೆ, ರಾಜಸ್ಥಾನ್ ರಾಯಲ್ಸ್ ತಂಡದಿಂದ ಒಂದೆರಡು ಆಟಗಾರರು ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಲಿದ್ದಾರೆ. ಅದೇ ರೀತಿ, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೆಲವು ಪ್ರಮುಖ ಆಟಗಾರರು ರಾಜಸ್ಥಾನ್ ರಾಯಲ್ಸ್ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.ಐಪಿಎಲ್ ಇತಿಹಾಸದಲ್ಲೇ ಹೊಸ ಸಂಚಲನ ಸೃಷ್ಟಿಸಲಿರುವ ಈ ಬೃಹತ್ ಆಟಗಾರರ ಅದಲು-ಬದಲು ಪ್ರಕ್ರಿಯೆಯಲ್ಲಿ ಅಂತಿಮವಾಗಿ ಯಾವ ಆಟಗಾರರು ಯಾವ ತಂಡದ ಜರ್ಸಿ ತೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.