ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್‌ನಿಂದ ತೆಗೆದುಹಾಕಿ’; ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ
IPL 2024: ಐಪಿಎಲ್ನಲ್ಲಿ ಬಳಸುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಈ ನಿಯಮವನ್ನು ಮುಂದಿನ ಆವೃತ್ತಿಯಿಂದ ತೆಗೆದುಹಾಕಿ ಎಂದು ಆಗ್ರಹಿಸಿದ್ದಾರೆ.
ಐಪಿಎಲ್ 2024 ರ ಹರಾಜು (IPL 2024 Auction) ಡಿಸೆಂಬರ್ 19 ರಿಂದ ದುಬೈನಲ್ಲಿ ನಡೆಯಲಿದೆ. ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು. ಇದಕ್ಕಾಗಿ ಎಲ್ಲಾ ಪ್ರಾಂಚೈಸಿಗಳ ಕೂಡ ಅಂತಿಮ ತಯಾರಿಯಲ್ಲಿವೆ. ಈ ನಡುವೆ ಐಪಿಎಲ್ನಲ್ಲಿ ಬಳಸುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ (Wasim Jaffer), ಈ ನಿಯಮವನ್ನು ಮುಂದಿನ ಆವೃತ್ತಿಯಿಂದ ತೆಗೆದುಹಾಕಿ ಎಂದು ಆಗ್ರಹಿಸಿದ್ದಾರೆ. ಈ ನಿಯಮದಿಂದ ಆಗುತ್ತಿರುವ ನಷ್ಟದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜಾಫರ್, ಈ ನಿಯಮದಿಂದಾಗಿ ಆಲ್‌ರೌಂಡರ್‌ಗಳ ಬಳಕೆ ಕಡಿಮೆಯಾಗುತ್ತಿದೆ. ದೇಶೀಯ ಕ್ರಿಕೆಟ್‌ನಲ್ಲೂ ಈ ನಿಯಮವನ್ನು ಬಳಸುವುದರಿಂದ ಭವಿಷ್ಯದಲ್ಲಿ ಭಾರತಕ್ಕೆ ಉತ್ತಮ ಆಲ್‌ರೌಂಡರ್‌ಗಳ ಕೊರತೆ ಎದುರಾಗಲಿದೆ ಎಂದಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ವಿರೋಧ
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜಾಫರ್, ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಆಲ್ರೌಂಡರ್ಗಳನ್ನು ಬೌಲಿಂಗ್ನಲ್ಲಿ ಹೆಚ್ಚು ಬಳಸಿಕೊಳ್ಳಲಾಗುವುದಿಲ್ಲ. ಹೀಗಾಗಿ ಈ ನಿಯಮವನ್ನು ಐಪಿಎಲ್‌ನಿಂದ ತೆಗೆದುಹಾಕುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಈ ನಿಯಮದಿಂದಾಗಿ ಆಲ್‌ರೌಂಡರ್‌ಗಳು ಹೆಚ್ಚು ಬೌಲಿಂಗ್ ಮಾಡದಿರುವುದು ಭಾರತೀಯ ಕ್ರಿಕೆಟ್‌ಗೆ ಮುಂದೆ ಒಂದು ದೊಡ್ಡ ಅಪಾಯ ತಂದೊಡ್ಡಲಿದೆ ಎಂದಿದ್ದಾರೆ.
I think IPL needs to take away the impact player rule, as it’s not encouraging the all rounders to bowl much and lack of ARs and batters not bowling is a major area of concern for Indian cricket. Thoughts? #IPL2024 #iplauction2024
— Wasim Jaffer (@WasimJaffer14) December 10, 2023
ಮೊದಲ ಬಾರಿಗೆ ಎಲ್ಲಿ ಬಳಕೆ?
ವಾಸ್ತವವಾಗಿ ಕಳೆದ ಆವೃತ್ತಿಯಿಂದ ಐಪಿಎಲ್‌ನಲ್ಲಿನ ಬಳಸಲಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮೊದಲ ಬಾರಿಗೆ ಆಸ್ಟ್ರೇಲಿಯನ್ ಬಿಗ್ ಬ್ಯಾಷ್ ಲೀಗ್‌ನಿಂದ ಜಾರಿಗೆ ತರಲಾಯಿತು. ಆ ಬಳಿಕ ಭಾರತದ ದೇಶಿ ಪಂದ್ಯಾವಳಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪ್ರಯತ್ನಿಸಲಾಯಿತು. ಆ ನಂತರ ಅಂತಿಮವಾಗಿ ಈ ನಿಯಮವನ್ನು ಐಪಿಎಲ್ನಲ್ಲಿ ಅಳವಡಿಸಿಕೊಳ್ಳಲಾಯಿತು. ಈ ನಿಯಮದಿಂದಾಗಿ, ಆಲ್‌ರೌಂಡರ್‌ಗಳ ಮೇಲೆ ತಂಡದ ಅವಲಂಬನೆ ಕಡಿಮೆಯಾಗಿದೆ. ಏಕೆಂದರೆ ಈ ನಿಯಮದಿಂದಾಗಿ ತಂಡವು ಸಂದರ್ಭಕ್ಕೆ ತಕ್ಕಂತೆ ತಮಗೆ ಬೇಕಾದ ಆಟಗಾರರನ್ನು (ಒಬ್ಬ ಬೌಲರ್ ಅಥವಾ ಬ್ಯಾಟರ್) ಬಳಸಬಹುದಾಗಿದೆ.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಹತ್ವದ ಬದಲಾವಣೆ..!
ಈ ನಿಯಮದ ಪ್ರಕಾರ, ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ತಂಡವು ಆಟದ ಮಧ್ಯದಲ್ಲಿ ಆಟಗಾರನನ್ನು ಬದಲಾಯಿಸಬಹುದಾಗಿದೆ. ಐಪಿಎಲ್ 2023 ರಲ್ಲಿ ತುಷಾರ್ ದೇಶಪಾಂಡೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಬಂದ ಮೊದಲ ಆಟಗಾರರಾಗಿದ್ದಾರೆ. ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ತಂಡವು, ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಅಂಬಟಿ ರಾಯುಡು ಬದಲಿಗೆ ತುಷಾರ್ ದೇಶಪಾಂಡೆ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡಿತ್ತು.
ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
ಈ ನಿಯಮದ ಪ್ರಕಾರ ಟಾಸ್ ಸಮಯದಲ್ಲಿ, ಆಡುವ ಹನ್ನೊಂದರ ಬಳಗವನ್ನು ಹೊರತುಪಡಿಸಿ ತಂಡದ ನಾಯಕನು ಪಂದ್ಯದ ಸಮಯದಲ್ಲಿ ಬಳಸಲು ಬಯಸುವ ಇನ್ನೂ 5 ಆಟಗಾರರ ಹೆಸರನ್ನು ಮೊದಲೇ ಆಯೋಜಕರಿಗೆ ನೀಡಬೇಕಾಗುತ್ತದೆ. ಈ 5 ಆಟಗಾರರಲ್ಲಿ, ಯಾವುದೇ ಒಬ್ಬ ಆಟಗಾರನನ್ನು ಪಂದ್ಯದ ಮಧ್ಯದಲ್ಲಿ ಮತ್ತೊಬ್ಬ ಆಟಗಾರನ ಬದಲಿಯಾಗಿ ಆಡಿಸಬಹುದಾಗಿದೆ. ಈ ನಿಯಮದಿಂದಾಗಿ 12 ಆಟಗಾರರು ಪಂದ್ಯದಲ್ಲಿ ಆಡಿದಂತ್ತಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Mon, 11 December 23