
19ನೇ ಆವೃತ್ತಿಯ ಐಪಿಎಲ್ (IPL 2026) ಆರಂಭಕ್ಕೆ ದಿನಗಳ ಏಣಿಕೆ ಶುರುವಾಗಿದೆ ಹೊಸ ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಅಭಿಮಾನಿಗಳ ಮನದಲ್ಲಿ ಮೂಡಿರುವ ಪ್ರಮುಖ ಪ್ರಶ್ನೆಯೆಂದರೆ, ಹಾಲಿ ಚಾಂಪಿಯನ್ ಆರ್ಸಿಬಿ (RCB) ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುತ್ತದೆಯೇ? ಎಂಬುದು. ಏಕೆಂದರೆ ಪಂದ್ಯಾವಳ ಸನಿಹವಾಗುತ್ತಾ ಬಂದರೂ ಆರ್ಸಿಬಿ ಫ್ರಾಂಚೈಸಿ ಮಾತ್ರ ತನ್ನ ತವರು ನೆಲವನ್ನು ಇದುವರೆಗೂ ಖಚಿತಪಡಿಸಿರಲಿಲ್ಲ. ಆದರೀಗ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ತವರು ಪಂದ್ಯಗಳನ್ನು ಆಡಿಸಲು ಆರ್ಸಿಬಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಇದರರ್ಥ ಆರ್ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಲಿದೆ. ಅಂದರೆ ಕಿಂಗ್ ಕೊಹ್ಲಿ ಬೆಂಗಳೂರಿನಲ್ಲಿ ಬ್ಯಾಟ್ ಬೀಸುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.
ಜನವರಿ 21 ರಂದು ಅಂದರೆ ನಿನ್ನೆಯಷ್ಟೇ ಕೆಎಸ್ಸಿಎ ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ, ಚಿನ್ನಸ್ವಾಮಿ ಕ್ರೀಡಾಂಗಣದ ದುರಸ್ತಿ ಕಾರ್ಯ ಭಾಗಶಃ ಮುಗಿದಿದ್ದು, ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗುತ್ತಿದೆ. ಇತ್ತ ಸರ್ಕಾರ ಕೂಡ ಚಿನ್ನಸ್ವಾಮಿಯಲ್ಲಿ ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಹೀಗಾಗಿ ನಾವು ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಬೇಕೆಂದು ನಾವು ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಫ್ರಾಂಚೈಸಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದಿತ್ತು.
ಇದೀಗ ಕೆಎಸ್ಸಿಎಯ ಸುದ್ದಿಗೋಷ್ಠಿ ನಡೆದ ಒಂದು ದಿನದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆರ್ಸಿಬಿ ಆಡಳಿತ ಮಂಡಳಿ, ‘ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದ ಕರ್ನಾಟಕ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಮ್ಮ ಅಭಿಮಾನಿಗಳ ನಡುವೆ ಪಂದ್ಯ ನಡೆಸಲು ಉತ್ಸುಕರಾಗಿದ್ದೇವೆ. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸರಿಪಡಿಸಬೇಕಿದೆ. ಪ್ರೇಕ್ಷಕರ ಭದ್ರತಾ ದ್ರೃಷ್ಟಿಯಿಂದ ಕೆಲವನ್ನು ಸರಿಪಡಿಸಬೇಕಿದೆ. ಅಭಿಮಾನಿಗಳ ಸುರಕ್ಷತೆಗೆ ಸಾಧ್ಯವಿರುವ ಎಲ್ಲಾ ರೀತಿಯ ಭದ್ರತಾ ಕ್ರಮ ತೆಗೆದುಕೊಳ್ಳಬೇಕು. ಆರ್ಸಿಬಿ ಪಾಲಿಗೆ ಅಭಿಮಾನಿಗಳೇ ಆತ್ಮ ಮತ್ತು ಹೃದಯ. ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸಲು KSCA ಯತ್ನ ಶ್ಲಾಘನೀಯ ಎಂದಿದೆ.
IPL 2026: ‘ಐಪಿಎಲ್ಗೆ ಚಿನ್ನಸ್ವಾಮಿ ರೆಡಿ ಇದ್ರು ಆರ್ಸಿಬಿ ಮನಸ್ಸು ಮಾಡ್ತಿಲ್ಲ’; ವೆಂಕಟೇಶ್ ಪ್ರಸಾದ್
ಇನ್ನು ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೆಂಕಟೇಶ್ ಪ್ರಸಾದ್, ‘ಬೆಂಗಳೂರಿನಲ್ಲಿ ಮತ್ತೆ ಐಪಿಎಲ್ ಪಂದ್ಯ ಆಡಿಸಲು ಸಿದ್ಧರಿದ್ದೇವೆ. ಆದ್ರೆ ಆರ್ಸಿಬಿ ಮ್ಯಾನೇಜ್ಮೆಂಟ್ ಅಷ್ಟು ಒಲವು ತೋರಿಸುತ್ತಿಲ್ಲ. ಹೀಗಾಗಿ ಇಲ್ಲಿನ ಕ್ರಿಕೆಟ್ ಅಭಿಮಾನಿಗಳಿಗಾಗಿ ನೀವೂ ಇಲ್ಲಿ ಆಡಬೇಕು ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ಬಳಿ ಮನವಿ ಮಾಡುತ್ತಿದ್ದೇವೆ. ಅಲ್ಲದೆ ನಿಮಗೆ ಏನೇ ಸಂಶಯಗಳಿದ್ರು ಸರ್ಕಾರದ ಜೊತೆ ಮಾತನಾಡಿ ಎಂಬ ಸಲಹೆಯನ್ನು ನೀಡಿದ್ದೇವೆ. ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ತನ್ನ ಪಂದ್ಯಗಳನ್ನು ಆಡಬೇಕು ಅನ್ನೋದು ನಮ್ಮ ಆಶಯ ಎಂದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ