IPL 2026: ‘ಐಪಿಎಲ್ಗೆ ಚಿನ್ನಸ್ವಾಮಿ ರೆಡಿ ಇದ್ರು ಆರ್ಸಿಬಿ ಮನಸ್ಸು ಮಾಡ್ತಿಲ್ಲ’; ವೆಂಕಟೇಶ್ ಪ್ರಸಾದ್
IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ವರ್ಷದಿಂದ ಪಂದ್ಯಗಳಿಲ್ಲ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಕ್ರಿಕೆಟ್ ಮರಳಿ ತರಲು ಯತ್ನಿಸುತ್ತಿದ್ದಾರೆ. ಸರ್ಕಾರ ಬೆಂಬಲವಿದೆ, ಆದರೆ ಆರ್ಸಿಬಿ ಬೆಂಗಳೂರಿನಲ್ಲಿ ಪಂದ್ಯವಾಡಲು ಹಿಂದೇಟು ಹಾಕುತ್ತಿದೆ. ಕ್ರೀಡಾಂಗಣದ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ. ಭದ್ರತೆ ಸುಧಾರಿಸಲಾಗಿದೆ. ಆದರೂ IPL ಬೆಂಗಳೂರಿಗೆ ಮರಳುವ ಬಗ್ಗೆ ಅನುಮಾನ ಮೂಡಿದೆ.

ಚಿನ್ನಸ್ವಾಮಿ ಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದು ಹತ್ತಿರ ಹತ್ತಿರ ವರ್ಷವಾಗುತ್ತಾ ಬರುತ್ತಿದೆ. ಆರ್ಸಿಬಿ (RCB) ವಿಜಯೋತ್ಸವದ ಮೆರವಣಿಗೆಯಲ್ಲಿ ಆದ ಅವಘಡದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಆದರೆ ವೆಂಕಟೇಶ್ ಪ್ರಸಾದ್ ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಚಿನ್ನಸ್ವಾಮಿಗೆ ಕ್ರಿಕೆಟ್ ಮರಳಿ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್ (IPL) ಪಂದ್ಯಾವಳಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬಹುದು ಎಂದು ಆಸೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದುವರೆಗೆ ಸಿಹಿ ಸುದ್ದಿ ಸಿಕ್ಕಿಲ್ಲ. ಇದೆಲ್ಲದರ ನಡುವೆ ಇಂದು ಕೆಎಸ್ಸಿಎಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಚಿನ್ನಸ್ವಾಮಿಗೆ ಕ್ರಿಕೆಟ್ ಪಂದ್ಯಗಳನ್ನು ಮರಳಿ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಸರ್ಕಾರ ಕೂಡ ನಮ್ಮ ಜೊತೆಗಿದೆ. ಆದರೆ ಆರ್ಸಿಬಿ ಯಾಕೋ ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸಲು ಅಷ್ಟು ಒಲವು ತೋರಿಸುತ್ತಿಲ್ಲ ಎಂದಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವುದು ಅನುಮಾನ ಎಂದು ತೋರುತ್ತಿದೆ.
ಆರ್ಸಿಬಿ ಒಲವು ತೋರಿಸುತ್ತಿಲ್ಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ್ ಪ್ರಸಾದ್, ‘ಬೆಂಗಳೂರಿನಲ್ಲಿ ಮತ್ತೆ ಐಪಿಎಲ್ ಪಂದ್ಯ ಆಡಿಸಲು ಸಿದ್ಧರಿದ್ದೇವೆ. ಆದ್ರೆ ಆರ್ಸಿಬಿ ಮ್ಯಾನೇಜ್ಮೆಂಟ್ ಅಷ್ಟು ಒಲವು ತೋರಿಸುತ್ತಿಲ್ಲ. ಹೀಗಾಗಿ ಇಲ್ಲಿನ ಕ್ರಿಕೆಟ್ ಅಭಿಮಾನಿಗಳಿಗಾಗಿ ನೀವೂ ಇಲ್ಲಿ ಆಡಬೇಕು ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ಬಳಿ ಮನವಿ ಮಾಡುತ್ತಿದ್ದೇವೆ. ಅಲ್ಲದೆ ನಿಮಗೆ ಏನೇ ಸಂಶಯಗಳಿದ್ರು ಸರ್ಕಾರದ ಜೊತೆ ಮಾತನಾಡಿ ಎಂಬ ಸಲಹೆಯನ್ನು ನೀಡಿದ್ದೇವೆ. ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ತನ್ನ ಪಂದ್ಯಗಳನ್ನು ಆಡಬೇಕು ಅನ್ನೋದು ನಮ್ಮ ಆಶಯ.
‘ಆದಷ್ಟು ಬೇಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸುತ್ತೇವೆ. ಅಂತಾರಾಷ್ಟ್ರೀಯ, ಐಪಿಎಲ್ ಪಂದ್ಯಗಳನ್ನು ಮತ್ತೆ ಬೆಂಗಳೂರಿಗೆ ತರುತ್ತೇವೆ. ಕರ್ನಾಟಕ ಸರ್ಕಾರ ನಮ್ಮ ಜೊತೆಗಿದೆ. ನಾವೂ ಸರ್ಕಾರದ ಇಲಾಖೆಗಳಿಗೆ ಮನವೊಲಿಸುತ್ತೇವೆ. ಜಿಬಿಎ, ಬೆಸ್ಕಾಂ, BWSSB, ಪೊಲೀಸ್ ಎಲ್ಲರ ವಿಶ್ವಾಸ ಗಿಟ್ಟಿಸುವ ಭರವಸೆ ಇದೆ. ಎಲ್ಲವನ್ನು ಕೂಡಲೇ ಮಾಡುವುದು ಅಷ್ಟು ಸುಲಭವಲ್ಲ. ಆದ್ರೆ ನಾವು ಮ್ಯಾನೇಜ್ ಮಾಡುತ್ತೇವೆ. ಆ ಕೆಲಸವನ್ನು ನಮ್ಮ ಕಮಿಟಿ ಮಾಡಲಿದೆ. ನಾವು ಕ್ರಿಕೆಟ್ ಅಭಿಮಾನಿಗಳಿಗೆ ಮಾತು ಕೊಡುತ್ತಿದ್ದೇವೆ. ಮತ್ತೇ ಚಿನ್ನಸ್ವಾಮಿ ಯಲ್ಲಿ ಪದ್ಯಗಳನ್ನು ಆದಷ್ಟು ಬೇಗ ಆಯೋಜಿಸುತ್ತೇವೆ ಎಂದಿದ್ದಾರೆ.
ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್: ತವರಿಗೆ ಮರಳುತ್ತಾ ಆರ್ಸಿಬಿ?
ಅವರೇ ಉತ್ತರ ಕೊಡಬೇಕು
ಇನ್ನು ಕಾಲ್ತುಳಿತ ಪ್ರಕರಣದಲ್ಲಿ ಆರ್ಸಿಬಿಯನ್ನು ಟಾರ್ಗೆಟ್ ಮಾಡಿದ್ದಕ್ಕೆ, ಆಡಳಿತ ಮಂಡಳಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಹಿಂಜರಿಕೆ ಮಾಡುತ್ತಿದ್ದೇಯಾ ಎಂಬ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ ಪ್ರಸಾದ್,‘ ಇರಬಹುದೇನೋ ಆದರೆ ಅವರೇ ಉತ್ತರ ಕೊಡಬೇಕು. ಆದರೆ ನಾವು ಗೇಟ್ಗಳು, ಸ್ಟ್ಯಾಂಡ್ಗಳ ದುರಸ್ತಿ ಮಾಡಿದ್ದೇವೆ. ಈ ಮೂಲಕ ಫೈರ್ ಇಂಜಿನ್ ಒಳಗೆ ಬರಲು ಅನುಕೂಲ ಆಗುತ್ತೆ. ಹಾಗೇ ಗೇಟ್ ಆರು ಮೀಟರ್ ಅಗಲ ಮಾಡುತ್ತಿದ್ದೆವೆ. ಗೋಡೆಗಳನ್ನು ದುರಸ್ತಿ ಮಾಡುತ್ತಿದ್ದೇವೆ. ಅಗ್ನಿ ಶಾಮಕ ಕಾಮಗಾರಿ ಈಗಾಗಲೇ ಮುಗಿದಿದೆ. ಇನ್ನು ಕೆಲವು ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ. 50 ಸಾವಿರ ಲೀಟರ್ ಸಾಮರ್ಥ್ಯ ಟ್ಯಾಂಕ್ ಮಾಡುತ್ತಿದ್ದೇವೆ. ಬೆಸ್ಕಾಂ ಕೆಲಸ ಕೂಡ ಈಗಾಗಲೇ ಮುಗಿದಿದೆ. ಹಾಗೇ ಒಂದು ವಾರದಲ್ಲಿ ಆರ್ ಸಿಬಿಯನ್ನು ಸಂಪರ್ಕಿಸಿದ್ದೆವೆ. ಆದರೆ ಅವರಿಂದ ಯಾವುದೇ ಸ್ಪಷ್ಟ ಸಂದೇಶ ಬಂದಿಲ್ಲ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Wed, 21 January 26
