ಐರಿಶ್ ನಾಡಿಗೆ ಪ್ರವಾಸ ಬೆಳೆಸಿರುವ ನ್ಯೂಜಿಲೆಂಡ್ ತಂಡ ಐರ್ಲೆಂಡ್ (Ireland vs New Zealand) ವಿರುದ್ಧ ಏಕದಿನ ಸರಣಿಯನ್ನು ಆಡಿ ಮುಗಿಸಿದೆ. 3-0 ಅಂತರದಿಂದ ಕಿವೀಸ್ ಪಡೆ ಸರಣಿ ಕ್ಲೀನ್ಸ್ವೀಪ್ ಮಾಡಿದ ಸಾಧನೆ ಗೈದಿದೆ. ಮೊದಲ ಏಕದಿನ ಪಂದ್ಯದಲ್ಲಿ 1 ವಿಕೆಟ್ಗಳಿಂದ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ 3 ವಿಕೆಟ್ಗಳ ಜಯ ಸಾಧಿಸಿತ್ತು. ಶುಕ್ರವಾರ ನಡೆದ ಅಂತಿಮ ಮೂರನೇ ಏಕದಿನದಲ್ಲಿ 1 ರನ್ಗಳ ರೋಚಕ ಜಯ ಸಾಧಿಸಿತು. ನ್ಯೂಜಿಲೆಂಡ್ ತಂಡ ಈ ಎಲ್ಲ ಪಂದ್ಯ ಗೆದ್ದಿತಾದರೂ ದುರ್ಬಲ ತಂಡವಾಗಿ ಗುರಿತಿಸಿಕೊಂಡಿದ್ದ ಐರ್ಲೆಂಡ್ ಕಠಿಣ ಪೈಪೋಟಿ ನೀಡಿದ್ದು ಸುಳ್ಳಲ್ಲ. ಅದರಲ್ಲೂ ತೃತೀಯ ಏಕದಿನ (ODI Match) ಪಂದ್ಯದಲ್ಲಿ ಕಿವೀಸ್ ನೀಡಿದ್ದ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿ ಕೇವಲ 1 ರನ್ಗಳಿಂದ ಸೋಲು ಕಾಣಬೇಕಾಯಿತು. ಮಾರ್ಟಿನ್ ಗಪ್ಟಿಲ್ (Martin Guptill) ಶತಕದಿಂದ 50 ಓವರ್ಗಳಲ್ಲಿ ನ್ಯೂಜಿಲೆಂಡ್ 360 ರನ್ ಗಳಿಸಿದ್ದರೆ, ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ 359 ರನ್ ಗಳಿಸಿ 1 ರನ್ಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಓಪನರ್ಗಳಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ಫಿನ್ ಅಲೆನ್ ಬೊಂಬಾಟ್ ಆರಂಭ ನೀಡಿದರು. ಮೊದಲ ವಿಕೆಟ್ಗೆ ಈ ಜೋಡಿ 78 ರನ್ ಕಲೆಹಾಕಿತು. ಅಲೆನ್ 28 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಬಂದ ಬೆನ್ನಲ್ಲೇ ವಿಲ್ ಯಂಗ್ 3 ರನ್ಗೆ ಪೆವಿಲಿಯನ್ ಸೇರಿಕೊಂಡರೆ, ನಾಯಕ ಟಾಮ್ ಲಾಥಮ್ 30 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಗಪ್ಟಿಲ್ ಜೊತೆಯಾದ ಹೆನ್ರಿ ನಿಕೋಲ್ಸ್ ಭರ್ಜರಿ ಜೊತೆಯಾಟ ಆಡಿದರು.
ಐರ್ಲೆಂಡ್ ಬೌಲರ್ಗಳ ಬೆವರಿಳಿಸಿದ ಈ ಜೋಡಿ 96 ರನ್ ಕಲೆಹಾಕಿತು. ಆಕರ್ಷಕ ಬ್ಯಾಟಿಂಗ್ ನಡೆಸಿದ ಗಪ್ಟಿಲ್ ಶತಕ ಸಿಡಿಸಿ ಮಿಂಚಿದರು. 126 ಎಸೆತಗಳಲ್ಲಿ 15 ಫೋರ್, 2 ಸಿಕ್ಸರ್ನೊಂದಿಗೆ 115 ರನ್ ಚಚ್ಚಿದರು. ನಿಕೋಲ್ಸ್ 54 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್ನೊಂದಿಗೆ 79 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ 47 ಹಾಗೂ ಬ್ರೆಸ್ವೆಲ್ ಅಜೇಯ 21 ರನ್ ಗಳಿಸಿ ಅಂತಿಮ ಹಂತದಲ್ಲಿ ನೆರವಾದರು. ನ್ಯೂಜಿಲೆಂಡ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 360 ರನ್ ಕಲೆಹಾಕಿತು.
ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭದಲ್ಲೇ ನಾಯಕ ಆಂಡ್ರೆ ಬಲ್ಬಿರ್ನಿ (0) ವಿಕೆಟ್ ಕಳೆದುಕೊಂಡಿತು. ಆ್ಯಂಡಿ ಮೆಕ್ಬ್ರಿನ್ 26 ರನ್ಗೆ ಔಟಾದರು. ಈ ಸಂದರ್ಭ ಜೊತೆಯಾದ ಪೌಲ್ ಸ್ಟಿರ್ಲಿಂಗ್ ಮತ್ತು ಹ್ಯಾರಿ ಟೆಕ್ಟರ್ ಯಾರೂ ಊಹಿಸಲಾಗದ ರೀತಿಯಲ್ಲಿ ಜೊತೆಯಾಟ ಆಡಿದರು. ಕಿವೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಇವರು 179 ರನ್ಗಳ ಕಾಣಿಕೆ ನೀಡಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು ಕೂಡ.
ಟೆಕ್ಟನ್ 106 ಎಸೆತಗಳಲ್ಲಿ 108 ರನ್ ಸಿಡಿಸಿದರೆ, ಪೌಲ್ ಸ್ಟಿರ್ಲಿಂಗ್ 103 ಎಸೆತಗಳಲ್ಲಿ 120 ರನ್ ಚಚ್ಚಿದರು. ಇವರಿಬ್ಬರು ತಂಡ ಗೆಲುವು ಸಾಧಿಸಲು ಏನೋ ಮಾಡಬೇಕು ಅದನ್ನು ಮಾಡಿ ನಿರ್ಗಮಿಸಿದರು. ಆದರೆ, ನಂತರ ಬಂದ ಬ್ಯಾಟರ್ಗಳು ಇಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಕೊನೆಯ ಓವರ್ನಲ್ಲಿ ಐರ್ಲೆಂಡ್ ಗೆಲುವಿಗೆ 10 ರನ್ಗಳ ಅವಶ್ಯಕತೆಯಿತ್ತು. ಆದರೆ, ಅಂತಿಮವಾಗಿ 50 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 359 ರನ್ ಗಳಿಸಲಷ್ಟೇ ಶಕ್ತವಾಗಿ 1 ರನ್ಗಳಿಂದ ಸೋಲು ಕಾಣಬೇಕಾಯಿತು.