ಚಾಂಪಿಯನ್ಸ್ ಟ್ರೋಫಿ ನಂತರ ನಡೆಯಬೇಕಿದ್ದ ಸರಣಿ ರದ್ದು; ಕಾರಣ ಏನು ಗೊತ್ತಾ?
ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಹಣಕಾಸಿನ ಕೊರತೆಯಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯನ್ನು ರದ್ದುಗೊಳಿಸಿದೆ. 2030ರ ಟಿ20 ವಿಶ್ವಕಪ್ ಆತಿಥ್ಯಕ್ಕಾಗಿ ಡಬ್ಲಿನ್‌ನಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಹೂಡಿಕೆ ಅಗತ್ಯವಿದ್ದು, ಬಜೆಟ್ ಕೊರತೆಯೇ ಸರಣಿ ರದ್ದಿಗೆ ಕಾರಣ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಆದಾಗ್ಯೂ ಐರ್ಲೆಂಡ್ ಇತರ ದೇಶಗಳೊಂದಿಗೆ ಸರಣಿ ಆಡಲಿದೆ.

2025 ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಮುಕ್ತಾಯಗೊಂಡಿದೆ. ಇದೀಗ ವಿವಿದ ದೇಶಗಳು ದ್ವಿಪಕ್ಷೀಯ ಸರಣಿಗಳಲ್ಲಿ ಎದುರುಬದುರಾಗಲಿವೆ. ಅದೇ ರೀತಿ ಇಷ್ಟರಲ್ಲೇ ಆರಂಭವಾಗಬೇಕಿದ್ದ ವಿವಿಧ ಸ್ವರೂಪಗಳ ಸರಣಿಯೊಂದು ವಿಚಿತ್ರ ಕಾರಣಕ್ಕೆ ರದ್ದಾಗಿದೆ. ವಾಸ್ತವವಾಗಿ ಐರ್ಲೆಂಡ್ ಕ್ರಿಕೆಟ್ ತಂಡವು ವಿವಿಧ ಸ್ವರೂಪಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರು ನೆಲದಲ್ಲಿ ಸರಣಿಯನ್ನು ಆಡಬೇಕಿತ್ತು. ಆದರೀಗ ಹಣದ ಕೊರತೆಯಿಂದಾಗಿ ಉಭಯ ತಂಡಗಳ ನಡುವಿನ ಈ ಸರಣಿಯನ್ನು ರದ್ದುಗೊಳಿಸಿರುವುದಾಗಿ ಐರ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಮೊದಲು ರಾಜಕೀಯ ಕಾರಣಗಳಿಗಾಗಿ ಈ ದ್ವಿಪಕ್ಷೀಯ ಸರಣಿಯನ್ನು ರದ್ದುಗೊಳಿಸಿರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಐರ್ಲೆಂಡ್ ಕ್ರಿಕೆಟ್ ಸ್ಪಷ್ಟ ಕಾರಣ ನೀಡಿ ವದಂತಿಗಳಿಗೆ ತೆರೆ ಎಳೆದಿದೆ.
ಹಣದ ಕೊರತೆಯಿಂದ ರದ್ದು
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಕ್ರಿಕೆಟ್ ಐರ್ಲೆಂಡ್ ಸಿಇಒ ವಾರೆನ್ ಡ್ಯೂಟ್ರೋಮ್ ಅವರು ಅಫ್ಘಾನಿಸ್ತಾನ ಸರಣಿಯನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ‘ಮಂಡಳಿಯ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಮಂಡಳಿಯು ಕೆಲವು ಅಗತ್ಯ ಹೂಡಿಕೆಗಳನ್ನು ಮಾಡಲು ಬಯಸುತ್ತದೆ, ಇದರಿಂದಾಗಿ ಬಜೆಟ್ ಕೊರೆತೆಯಿಂದಾಗಿ ಈ ಸರಣಿಯನ್ನು ರದ್ದುಗೊಳಿಸಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಅಥವಾ ಮಾನವ ಹಕ್ಕುಗಳ ಕಾಳಜಿಯಿಂದಾಗಿ ಈ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿಯ ಪ್ರಕಾರ, ಐರ್ಲೆಂಡ್ 2030 ರ ಟಿ20 ವಿಶ್ವಕಪ್ ಅನ್ನು ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜೊತೆಗೆ ಆಯೋಜಿಸಲಿದೆ. ಅದಕ್ಕಾಗಿಯೇ ಡಬ್ಲಿನ್‌ನಲ್ಲಿ ಶಾಶ್ವತ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಐರಿಶ್ ಸರ್ಕಾರ ಈಗಾಗಲೇ ಈ ಯೋಜನೆಯನ್ನು 2023 ರಲ್ಲಿ ಅನುಮೋದಿಸಿದ್ದು ಅದರ ಕೆಲಸ ಪ್ರಗತಿಯಲ್ಲಿದೆ. ಈ ಕ್ರೀಡಾಂಗಣವು 2028 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದ್ದರಿಂದ ಮಂಡಳಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.
ಇಂಗ್ಲೆಂಡ್- ವಿಂಡೀಸ್ ತಂಡಗಳ ಪ್ರವಾಸ
ಮತ್ತೊಂದೆಡೆ, ಅಫ್ಘಾನಿಸ್ತಾನ ಸರಣಿ ರದ್ದಾದರೂ, ಐರ್ಲೆಂಡ್ ಇತರ ದೇಶಗಳೊಂದಿಗೆ ಸಾಕಷ್ಟು ಕ್ರಿಕೆಟ್ ಆಡಲಿದೆ. ಇತ್ತೀಚೆಗೆ ಬಿಡುಗಡೆಯಾದ ಫ್ಯೂಚರ್ ಟೂರ್ ಪ್ರೋಗ್ರಾಂ ಅಡಿಯಲ್ಲಿ, ಐರ್ಲೆಂಡ್ ಮೇ ಮತ್ತು ಜೂನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಯೋಜಿಸಲಿದೆ. ಅದಾದ ನಂತರ, ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತವರು ನೆಲದಲ್ಲಿ ಟಿ20 ಸರಣಿ ನಡೆಯಲಿದೆ. ಈ ಸರಣಿಯು ಐತಿಹಾಸಿಕವಾಗಿರಲಿದೆ, ಏಕೆಂದರೆ ಇದು ಇಂಗ್ಲೆಂಡ್ ವಿರುದ್ಧ ಅವರ ಮೊದಲ ತವರು ಸರಣಿಯಾಗಲಿದೆ.
ಇದನ್ನೂ ಓದಿ: 416 ವಿಕೆಟ್, 13 ಶತಕ ಸಿಡಿಸಿದ್ದ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ನಿಧನ
8 ವರ್ಷಗಳಲ್ಲಿ ಕೇವಲ 10 ಟೆಸ್ಟ್
2017 ರಲ್ಲಿ ಐರ್ಲೆಂಡ್ ತಂಡಕ್ಕೆ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರ ಸ್ಥಾನಮಾನ ನೀಡಿತು. 8 ವರ್ಷಗಳು ಕಳೆದರೂ, ಐರ್ಲೆಂಡ್ ಇದುವರೆಗೆ ಕೇವಲ 10 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದೆ. ಇದರಲ್ಲಿ ಐರ್ಲೆಂಡ್ ಕ್ರಿಕೆಟ್ ಮಂಡಳಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಯೋಜಿಸಿದೆ. ಇದೀಗ ಮತ್ತೊಮ್ಮೆ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಅವಕಾಶ ಸಿಕ್ಕಿತ್ತಾದರೂ ಅಫ್ಘಾನಿಸ್ತಾನ ವಿರುದ್ಧದ ಸರಣಿ ರದ್ದಾದ ಕಾರಣ, ಈ ಅವಕಾಶವೂ ಕಳೆದುಹೋಗಿದೆ. 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯ ಜೊತೆಗೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ಒಂದು ಪಂದ್ಯದ ಟೆಸ್ಟ್ ಸರಣಿಯೂ ನಡೆಯಬೇಕಿತ್ತು. ಆದರೀಗ ಹಣಕಾಸಿನ ಕೊರತೆಯಿಂದಾಗಿ ಈ ಪ್ರವಾಸ ರದ್ದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ