416 ವಿಕೆಟ್, 13 ಶತಕ ಸಿಡಿಸಿದ್ದ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ನಿಧನ
Syed Abid Ali: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸೈಯದ್ ಅಬಿದ್ ಅಲಿ ಅವರು 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 29 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ ಅವರು ಉತ್ತಮ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿದ್ದರು. ಅತ್ಯುತ್ತಮ ಫೀಲ್ಡರ್ ಆಗಿಯೂ ಹೆಸರುವಾಸಿಯಾಗಿದ್ದ ಅವರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ದಾಖಲೆಯ ಪ್ರದರ್ಶನ ನೀಡಿದ್ದರು. ಅವರ ನಿಧನಕ್ಕೆ ಕ್ರಿಕೆಟ್ ಜಗತ್ತು ಸಂತಾಪ ಸೂಚಿಸಿದೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೈಯದ್ ಅಬಿದ್ ಅಲಿ ಅವರು ಮಾರ್ಚ್ 12 ರಂದು ತಮ್ಮ 83 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆಲ್‌ರೌಂಡರ್ ಆಗಿದ್ದ ಸೈಯದ್ ಅಬಿದ್ ಅಲಿ ಅವರು ಭಾರತ ಪರ 29 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 416 ವಿಕೆಟ್‌ಗಳನ್ನು ಪಡೆದಿರುವುದರ ಜೊತೆಗೆ, ಅವರು 13 ಶತಕಗಳನ್ನು ಬಾರಿಸಿದ್ದರು. ಅತ್ಯುತ್ತಮ ಫೀಲ್ಡಿಂಗ್ಗೆ ಹೆಸರುವಾಸಿಯಾಗಿದ್ದ ಸೈಯದ್ ಅಬಿದ್ ಅಲಿ ಅವರ ನಿಧನಕ್ಕೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಸಂತಾಪ ವ್ಯಕ್ತಪಡಿಸಿದ್ದು, ‘ತುಂಬಾ ದುಃಖದ ಸುದ್ದಿ, ಅವರು ಸಿಂಹ ಹೃದಯದ ಕ್ರಿಕೆಟಿಗರಾಗಿದ್ದರು, ತಂಡದ ಅಗತ್ಯಕ್ಕೆ ಅನುಗುಣವಾಗಿ ಆಡುತ್ತಿದ್ದರು. ಅಗತ್ಯವಿದ್ದಾಗ ಅವರು ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಿದ್ದರು. ಅದ್ಭುತ ಫೀಲ್ಡರ್ ಆಗಿದ್ದ ಸೈಯದ್ ಅಬಿದ್ ಅಲಿ ಅವರ ಸ್ಪಿನ್ ಜಾದೂ ತಂಡದ ಸ್ಪಿನ್ ವಿಭಾಗದ ಬಲವನ್ನು ಹೆಚ್ಚಿಸಿತ್ತು ಎಂದು ಬರೆದುಕೊಂಡಿದ್ದಾರೆ.
ಮೊದಲ ಪಂದ್ಯದಲ್ಲೇ ದಾಖಲೆ
ಸೆಪ್ಟೆಂಬರ್ 9, 1941 ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ಅಬಿದ್ ಅಲಿ ಅವರು 1946 ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಶಾಲಾ ತಂಡದಲ್ಲಿ ಆಯ್ಕೆಯಾದರು. ಶಾಲಾ ಮಟ್ಟದಲ್ಲಿ 3 ವರ್ಷಗಳ ಕಾಲ ಆಡಿದ ನಂತರ, ಅವರು 1958-59 ರಲ್ಲಿ ಹೈದರಾಬಾದ್ ಜೂನಿಯರ್ ತಂಡಕ್ಕೆ ಆಯ್ಕೆಯಾದರು. ನಂತರ ಮುಂದಿನ ವರ್ಷವೇ ಅವರಿಗೆ ತಮ್ಮ ರಾಜ್ಯ ತಂಡದಿಂದ ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ಸಿಕ್ಕಿತು. ಇದಾದ ನಂತರ, 1967 ರಲ್ಲಿ, ಅವರು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದರು. ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಬಿದ್ 33 ರನ್ ಕಲೆಹಾಕಿದ್ದು ಮಾತ್ರವಲ್ಲದೆ, ಬೌಲಿಂಗ್‌ನಲ್ಲಿ 55 ರನ್‌ಗಳಿಗೆ 6 ವಿಕೆಟ್‌ಗಳನ್ನು ಸಹ ಪಡೆದರು. ಇದು ಆ ಸಮಯದಲ್ಲಿ ಯಾವುದೇ ಭಾರತೀಯ ಆಟಗಾರ ತನ್ನ ಚೊಚ್ಚಲ ಪಂದ್ಯದಲ್ಲೇ ನೀಡಿದ ಅತ್ಯುತ್ತಮ ಪ್ರದರ್ಶನವಾಗಿತ್ತು.
My first cricket hero. Rejoiced as a child when he had a great debut against Australia, was overjoyed when he scored the winning runs against England in 1971. Great trier, big hearted man. Khudahafiz Abid Chicha. #SyedAbidAli pic.twitter.com/OWICAGWCGr
— Harsha Bhogle (@bhogleharsha) March 12, 2025
ಫೀಲ್ಡಿಂಗ್ಗೆ ಹೆಚ್ಚು ಹೆಸರುವಾಸಿ
70 ರ ದಶಕದಲ್ಲಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ಆಟಗಾರರು ಸಾಮಾನ್ಯವಾಗಿ ತಮ್ಮ ಫಿಲ್ಡಿಂಗ್ಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಆದರೆ ಭಾರತ ತಂಡದಲ್ಲಿ ಫಿಟ್ನೆಸ್ ಮತ್ತು ಫೀಲ್ಡಿಂಗ್ ಮೇಲೆ ಗಮನ ಹರಿಸಿದ ಆಟಗಾರರು ಹೆಚ್ಚಿಗೆ ಇರಲಿಲ್ಲ. ಆದರೆ ಅಬಿದ್ ಅಲಿ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಹೊರತುಪಡಿಸಿ ಫೀಲ್ಡಿಂಗ್ ಮತ್ತು ಫಿಟ್ನೆಸ್‌ಗೆ ಹೆಸರುವಾಸಿಯಾದ ಮೊದಲ ಆಟಗಾರರಾಗಿದ್ದರು.
ಅಬಿದ್ ಅಲಿಯವರ ವೃತ್ತಿಜೀವನ
ಅಬಿದ್ ಅಲಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಭಾರತದ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 20.36 ಸರಾಸರಿಯಲ್ಲಿ 1018 ರನ್ ಗಳಿಸಿದ್ದು, ಅವರ ಬ್ಯಾಟ್‌ನಿಂದ 6 ಅರ್ಧಶತಕಗಳು ಸಿಡಿದಿವೆ. ಹಾಗೆಯೇ ಅವರು 42.12 ಸರಾಸರಿಯಲ್ಲಿ 47 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇದಲ್ಲದೆ ಅವರ 5 ಪಂದ್ಯಗಳ ಏಕದಿನ ವೃತ್ತಿಜೀವನದಲ್ಲಿ, ಅವರು 31 ರ ಸರಾಸರಿಯಲ್ಲಿ 93 ರನ್ ಗಳಿಸಿದ್ದು, 26.71 ರ ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ.
ಒಟ್ಟಾರೆ ವೃತ್ತಿಜೀವನವನ್ನು ನೋಡಿದರೆ, ಅಬಿದ್ ಅಲಿ 212 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 29.30 ಸರಾಸರಿಯಲ್ಲಿ 8732 ರನ್ ಜೊತೆಗೆ 397 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 13 ಶತಕಗಳು ಮತ್ತು 41 ಅರ್ಧಶತಕಗಳನ್ನು ಸಿಡಿಸಿದ್ದರು. 12 ಲಿಸ್ಟ್ ಎ ಪಂದ್ಯಗಳಲ್ಲಿ, ಅವರು 169 ರನ್ ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದರು. ಈ ರೀತಿಯಾಗಿ, ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ 416 ವಿಕೆಟ್‌ಗಳನ್ನು ಪಡೆದಿದ್ದು, 13 ಶತಕಗಳು ಮತ್ತು 42 ಅರ್ಧಶತಕಗಳ ಸಹಾಯದಿಂದ 8901 ರನ್ ಕಲೆಹಾಕಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ