ಕೆಲ ದಿನಗಳ ಹಿಂದೆಯಷ್ಟೇ ಅಫ್ಘಾನಿಸ್ತಾನ್ ವಿರುದ್ಧ ಏಕದಿನ ಸರಣಿ ಸೋತಿದ್ದ ಸೌತ್ ಆಫ್ರಿಕಾ ತಂಡವು ಇದೀಗ ಐರ್ಲೆಂಡ್ ವಿರುದ್ಧ ಕೂಡ ಮುಗ್ಗರಿಸಿದೆ. ಅಬುಧಾಬಿಯ ಶೇಕ್ ಝಾಯದ್ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಐರ್ಲೆಂಡ್ ತಂಡವು 10 ರನ್ಗಳ ರೋಚಕ ಜಯ ಸಾಧಿಸಿದೆ. ಇದು ಸೌತ್ ಆಫ್ರಿಕಾ ವಿರುದ್ಧ ಐರ್ಲೆಂಡ್ ತಂಡದ ಮೊದಲ ಗೆಲುವು ಎಂಬುದು ವಿಶೇಷ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಐರ್ಲೆಂಡ್ ಪರ ನಾಯಕ ಪೌಲ್ ಸ್ಟೀರ್ಲಿಂಗ್ ಹಾಗೂ ರಾಸ್ ಅಡೈರ್ ಸ್ಪೋಟಕ ಇನಿಂಗ್ಸ್ ಆಡಿದರು. ಮೊದಲ ವಿಕೆಟ್ಗೆ 137 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದರು.
ಈ ಹಂತದಲ್ಲಿ 52 ರನ್ ಬಾರಿಸಿದ ಪೌಲ್ ಸ್ಟೀರ್ಲಿಂಗ್ ಔಟಾದರು. ಇದಾಗ್ಯೂ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಅಡೈರ್ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಶತಕ ಸಿಡಿಸಿದರು. ಆದರೆ ರಾಸ್ ಅಡೈರ್ (100) ಔಟಾಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ 15 ಓವರ್ಗಳಲ್ಲಿ 150 ರನ್ಗಳ ಗಡಿದಾಟಿದ್ದ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್ಗಳಿಸಲಷ್ಟೇ ಶಕ್ತರಾದರು.
ಐರ್ಲೆಂಡ್ ನೀಡಿದ 196 ರನ್ಗಳ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಬ್ಯಾಟಿಂಗ್ ಅನ್ನೇ ಪ್ರದರ್ಶಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ರಿಯಾನ್ ರಿಕೆಲ್ಟನ್ 36 ರನ್ ಬಾರಿಸಿದರೆ, ರೀಝ ಹೆಂಡ್ರಿಕ್ಸ್ (51) ಹಾಗೂ ಮ್ಯಾಥ್ಯೂ ಬ್ರೀಟ್ಝ್ಕ್ (51) ಅರ್ಧಶತಕ ಸಿಡಿಸಿದರು.
ಈ ಮೂಲಕ ಐರ್ಲೆಂಡ್ ತಂಡವು 12 ಓವರ್ಗಳಾಗುವಷ್ಟರಲ್ಲಿ 120 ರನ್ಗಳ ಗಡಿದಾಟಿದ್ದರು. ಆದರೆ ಮೂರನೇ ವಿಕೆಟ್ ಬಳಿಕ ಸೌತ್ ಆಫ್ರಿಕಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 4ನೇ ಕ್ರಮಾಂಕದಿಂದ 10ನೇ ಕ್ರಮಾಂಕದವರೆಗೆ ಒಬ್ಬರೇ ಒಬ್ಬರು ಎರಡಂಕಿ ರನ್ಗಳಿಸಲು ಸಾಧ್ಯವಾಗಲಿಲ್ಲ.
ಇದಾಗ್ಯೂ ಅಂತಿಮ ಓವರ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 18 ರನ್ಗಳ ಅವಶ್ಯಕತೆಯಿತ್ತು. ಆದರೆ ಗ್ರಹಾಂ ಹ್ಯೂಮ್ ಕೇವಲ 7 ರನ್ಗಳ ನೀಡುವ ಮೂಲಕ ಸೌತ್ ಆಫ್ರಿಕಾ ತಂಡವನ್ನು 185 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಐರ್ಲೆಂಡ್ ತಂಡವು 10 ರನ್ಗಳ ರೋಚಕ ಜಯ ಸಾಧಿಸಿತು.
ಐರ್ಲೆಂಡ್ ಪ್ಲೇಯಿಂಗ್ 11: ಪಾಲ್ ಸ್ಟಿರ್ಲಿಂಗ್ (ನಾಯಕ) , ರಾಸ್ ಅಡೈರ್ , ಹ್ಯಾರಿ ಟೆಕ್ಟರ್ , ಕರ್ಟಿಸ್ ಕ್ಯಾಂಫರ್ , ನೀಲ್ ರಾಕ್ (ವಿಕೆಟ್ ಕೀಪರ್) , ಜಾರ್ಜ್ ಡಾಕ್ರೆಲ್ , ಮಾರ್ಕ್ ಅಡೇರ್ , ಫಿಯಾನ್ ಹ್ಯಾಂಡ್ , ಮ್ಯಾಥ್ಯೂ ಹಂಫ್ರೀಸ್ , ಬೆಂಜಮಿನ್ ವೈಟ್ , ಗ್ರಹಾಂ ಹ್ಯೂಮ್.
ಇದನ್ನೂ ಓದಿ: IPL 2025: ಏನಿದು RTM ಆಯ್ಕೆ: ಇದನ್ನು ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಸೌತ್ ಆಫ್ರಿಕಾ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಮ್ಯಾಥ್ಯೂ ಬ್ರೀಟ್ಝ್ಕ್ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟನ್ ಸ್ಟಬ್ಸ್ , ವಿಯಾನ್ ಮುಲ್ಡರ್ , ಪ್ಯಾಟ್ರಿಕ್ ಕ್ರುಗರ್ , ಜಾರ್ನ್ ಫಾರ್ಟುಯಿನ್ , ನ್ಕಾಬಾ ಪೀಟರ್ , ಲಿಜಾಡ್ ವಿಲಿಯಮ್ಸ್ , ಲುಂಗಿ ಎನ್ಗಿಡಿ.
Published On - 8:10 am, Mon, 30 September 24