ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಪ್ರದರ್ಶನ ಹೇಗಿದೆ?
Ishan Kishan: ಐಪಿಎಲ್ 2025 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 14 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಅವರು ಒಂದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ ಒಟ್ಟು 354 ರನ್ ಕಲೆಹಾಕಿದ್ದರು. ಇದೀಗ ಯುವ ಎಡಗೈ ದಾಂಡಿಗ ಟೀಮ್ ಇಂಡಿಯಾ ಪರ ಕೂಡ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಟಿ20 ಸರಣಿಯು ಬುಧವಾರದಿಂದ ಶುರುವಾಗಲಿದೆ. ನಾಗ್ಪುರದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಖಚಿತವಾಗಿದೆ. ಅಂದರೆ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಇಶಾನ್ ಸಜ್ಜಾಗಿದ್ದಾರೆ. ಅದು ಕೂಡ ಹೊಸ ಬ್ಯಾಟಿಂಗ್ ಕ್ರಮಾಂಕದಲ್ಲಿ.
ಸಾಮಾನ್ಯವಾಗಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯುವ ಆಟಗಾರ. ಆದರೆ ಕಳೆದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ ಉತ್ತಮ ಪ್ರದರ್ಶನ ನೀಡುವಲ್ಲಿಯೂ ಯಶಸ್ವಿಯಾಗಿದ್ದರು.
ಇದೀಗ ನ್ಯೂಝಿಲೆಂಡ್ ವಿರುದ್ಧ ಕೂಡ ಇಶಾನ್ ಕಿಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಎಡಗೈ ದಾಂಡಿಗ ತಿಲಕ್ ವರ್ಮಾ ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಅವರನ್ನು 3ನೇ ಸ್ಥಾನದಲ್ಲಿ ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸಲಾಗಿದೆ.
ಅದರಂತೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಲಿದ್ದಾರೆ.
3ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಪ್ರದರ್ಶನ ಹೇಗಿದೆ?
ಇಶಾನ್ ಕಿಶನ್ ಇದುವರೆಗೆ ನಾಲ್ಕು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 28.5 ಸರಾಸರಿಯಲ್ಲಿ 9 ಸಿಕ್ಸರ್‌ಗಳೊಂದಿಗೆ ಒಟ್ಟು 114 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ಇಶಾನ್ ಕಿಶನ್ ಮೊದಲ ಬಾರಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು 2021 ರಲ್ಲಿ. ಅಹಮದಾಬಾದ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒನ್ ಡೌನ್ ಸ್ಥಾನದಲ್ಲಿ ಕಣಕ್ಕಿಳಿದಿದ್ದ ಇಶಾನ್ ಕೇವಲ 4 ರನ್ ಮಾತ್ರ ಕಲೆಹಾಕಿದ್ದರು.
ಇದಾದ ಬಳಿಕ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಇಶಾನ್ ಮೊದಲ ಪಂದ್ಯದಲ್ಲಿ 58 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿ 52 ರನ್ ಕಲೆಹಾಕಿದ್ದರು. ಇನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 0 ಸೊನ್ನೆ ಸುತ್ತಿದ್ದರು.
ಇದೀಗ ಬರೋಬ್ಬರಿ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಪರ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅತ್ತ ಮೂರನೇ ಸ್ಥಾನದಲ್ಲಿ 4 ಮ್ಯಾಚ್ಗಳಲ್ಲಿ 2 ಅರ್ಧಶತಕ ಬಾರಿಸಿರುವ ಕಾರಣ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲೂ ಇಶಾನ್ ಕಿಶನ್ ಕಡೆಯಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು.
