
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ದಾಂಡಿಗ ಇಶಾನ್ ಕಿಶನ್ ಭಾರತ ಏಕದಿನ ತಂಡಕ್ಕೂ ಮರಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇಶಾನ್ ಕಿಶನ್ ಅವರ ಆಯ್ಕೆಯಿಂದ ಹೊರಬೀಳಲಿರುವುದು ರಿಷಭ್ ಪಂತ್ ಎಂಬುದು ಅಚ್ಚರಿ.
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಕೈ ಬಿಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತಿಸಿದೆ ಎಂದು ವರದಿಯಾಗಿದೆ. ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ.
ಇಶಾನ್ ಕಿಶನ್ ಭರ್ಜರಿ ಫಾರ್ಮ್ನಲ್ಲಿದ್ದು, ಈ ಫಾರ್ಮ್ ಕಾರಣದಿಂದಲೇ ಅವರು ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ವಿಜಯ ಹಝಾರೆ ಟೂರ್ನಿಯಲ್ಲೂ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಅದು ಕೂಡ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಎಂಬುದು ಇಲ್ಲಿ ಉಲ್ಲೇಖಾರ್ಹ.
ಈ ಸ್ಫೋಟಕ ಇನಿಂಗ್ಸ್ ಬೆನ್ನಲ್ಲೇ ಇಶಾನ್ ಕಿಶನ್ಗೆ ಭಾರತ ಏಕದಿನ ತಂಡದಲ್ಲೂ ಸ್ಥಾನ ನೀಡುವ ಬಗ್ಗೆ ಆಲೋಚಿಸಲಾಗಿದೆ. ಇತ್ತ ಇಶಾನ್ ಅವರನ್ನು ಆಯ್ಕೆ ಮಾಡಬೇಕಿದ್ದರೆ ಪಂತ್ ಅವರನ್ನು ಕೈ ಬಿಡಲೇಬೇಕು. ಏಕೆಂದರೆ ಇಬ್ಬರೂ ಸಹ ವಿಕೆಟ್ ಕೀಪರ್ ಬ್ಯಾಟರ್ಗಳು.
ಅತ್ತ ಇಶಾನ್ ಕಿಶನ್ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಹೀಗಾಗಿ ಅವರ ಆಯ್ಕೆಯಿಂದ ವಿಕೆಟ್ ಕೀಪರ್, ಫಿನಿಶರ್ ಹಾಗೂ ಓಪನರ್ ಸ್ಥಾನಗಳನ್ನು ತುಂಬಬಹುದು. ಹೀಗಾಗಿ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಿದರೂ ಇಶಾನ್ ಕಿಶನ್ ಅವರನ್ನು ಫಿನಿಶರ್ ರೂಪದಲ್ಲಿ ಕಣಕ್ಕಿಳಿಸುವ ಅವಕಾಶ ಕೂಡ ದೊರೆಯಲಿದೆ. ಹೀಗಾಗಿ ಕಿವೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಭಾರತದ ಸಂಭಾವ್ಯ ತಂಡ: ಶುಭ್ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ) , ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಜೋಶ್ ಟಂಗ್ ಕರಾರುವಾಕ್ ದಾಳಿಯಿಂದ ಆಸ್ಟ್ರೇಲಿಯಾಗೆ 60 ಕೋಟಿ ರೂ. ನಷ್ಟ..!