ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಅದು ಕೂಡ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. ಇಶಾನ್ ಕಿಶನ್ ಮುಂಬರುವ ಬುಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
2023 ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಇಶಾನ್ ಕಿಶನ್ ಅವರಿಗೆ ರಣಜಿ ಟೂರ್ನಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಬಿಸಿಸಿಐ ಸೂಚನೆಯನ್ನು ನಿರ್ಲಕ್ಷಿಸಿದ್ದರಿಂದ ಅವರನ್ನು ಕೇಂದ್ರೀಯ ಒಪ್ಪಂದದಿಂದ ಕೈ ಬಿಡಲಾಗಿತ್ತು. ಇದಾದ ಬಳಿಕ ಇಶಾನ್ ಕಿಶನ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿರಲಿಲ್ಲ.
ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ಝಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೂ ಇಶಾನ್ ಕಿಶನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಇಶಾನ್ ಕಿಶನ್ ಇದೀಗ ಬುಚಿ ಬಾಬು ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಅದರಂತೆ ಇದೀಗ ಬುಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ಪರ ನಾಯಕನಾಗಿ ಕಣಕ್ಕಿಳಿಯಲು ಇಶಾನ್ ಕಿಶನ್ ಸಜ್ಜಾಗಿದ್ದಾರೆ. ಈ ಮೂಲಕ ಮುಂಬರುವ ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ ಯುವ ಎಡಗೈ ದಾಂಡಿಗ.
ಮೊತವರಪು ವೆಂಕಟ ಮಹಿಪತಿ ನಾಯ್ಡು ಭಾರತದ ಮಾಜಿ ಕ್ರಿಕೆಟಿಗ. ಬುಚಿ ಬಾಬು ನಾಯ್ಡು ಎಂದೇ ಖ್ಯಾತರಾಗಿದ್ದ ವೆಂಕಟ ಮಹಿಪತಿ ಅವರು ಆಗಿನ ಮದ್ರಾಸ್‌ನಲ್ಲಿ ಕ್ರಿಕೆಟ್ ಅನ್ನು ಜನಸಾಮಾನ್ಯರಿಗೆ ತಲುಪಿಸಿದವರಲ್ಲಿ ಅಗ್ರಗಣ್ಯರು. ಇದೀಗ ಅವರ ಹೆಸರಿನಲ್ಲಿ ಬುಚಿ ಬಾಬು ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.
ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತವೆ. ವಿಶೇಷ ಎಂದರೆ ಈ ಪಂದ್ಯಾವಳಿ ಟೆಸ್ಟ್ ಮಾದರಿಯಲ್ಲಿ ನಡೆಯುತ್ತಿದ್ದರೂ, ಕೇವಲ 4 ದಿನದಾಟದಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!
ಇನ್ನು ಈ ಟೂರ್ನಿಯಲ್ಲಿ ಭಾಗವಹಿಸುವ 12 ತಂಡಗಳನ್ನು ತಲಾ ಮೂರರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ 10 ರಾಜ್ಯ ತಂಡಗಳಿದ್ದರೆ, ತಮಿಳುನಾಡಿನಿಂದ ಎರಡು ತಂಡಗಳು ಕಣಕ್ಕಿಳಿಯುತ್ತವೆ. ಅಂದರೆ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಅಧ್ಯಕ್ಷರ ಇಲೆವೆನ್ ಮತ್ತು ಟಿಎನ್‌ಸಿಎ ಇಲೆವೆನ್ ಎಂಬ ಹೆಸರಿನ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ.
Published On - 11:22 am, Tue, 13 August 24