ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

|

Updated on: Aug 14, 2021 | 2:47 PM

Jack Gregory: ಟೆಸ್ಟ್ ಕ್ರಿಕೆಟ್​ನ ಅತೀ ವೇಗದ ಶತಕದ ದಾಖಲೆ ಇರುವುದು ನ್ಯೂಜಿಲೆಂಡ್​ನ ಬ್ರೆಂಡಮ್ ಮೆಕಲಂ ಹೆಸರಿನಲ್ಲಿ. 2016 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಮೆಕಲಂ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಸಾಂದರ್ಭಿಕ ಚಿತ್ರ
Follow us on

ಕ್ರಿಕೆಟ್ ಅಂಗಳದಲ್ಲಿ ಅದೊಂದು ಕಾಲವಿತ್ತು. ನೂರು ಎಸೆತಗಳಲ್ಲಿ ನೂರು ರನ್ ಪೂರೈಸಿದರೆ ಅದುವೇ ಬಿರುಸಿನ ಬ್ಯಾಟಿಂಗ್. ಆ ಬಳಿಕ ಏಕದಿನ ಕ್ರಿಕೆಟ್ ಶುರುವಾದ ಬಳಿಕ ನೂರು ಬಾಲ್​ಗಳ ಆಸುಪಾಸಿನಲ್ಲಿ ಶತಕ ಸಿಡಿಸಿದ್ರೆ ಆತನೇ ಗ್ರೇಟ್. ಇನ್ನು ಟಿ20 ಕ್ರಿಕೆಟ್ ಆರಂಭವಾದ ಬಳಿಕ ಎಲ್ಲವೂ ಬದಲಾಯ್ತು. ವೇಗದ ಬ್ಯಾಟಿಂಗ್ ಬದಲು ಆಕ್ರಮಣಕಾರಿ ಆಟವೇ ಮೇಲು ಎಂಬಂತಾಯಿತು. ಸ್ವರೂಪಕ್ಕೆ ತಕ್ಕಂತೆ ಬ್ಯಾಟ್ಸ್​ಮನ್​ಗಳ ಬ್ಯಾಟಿಂಗ್ ಶೈಲಿ ಕೂಡ ಬದಲಾಯಿತು. ಹೀಗಾಗಿಯೇ 50 ಎಸೆತಗಳೊಳಗೆ ಶತಕಗಳು ಮೂಡಿಬರುವುದು ಸಾಮಾನ್ಯವಾಯಿತು. ಆದರೆ 100 ವರ್ಷಗಳ ಹಿಂದೆಯೇ ಬ್ಯಾಟ್ಸ್​ಮನ್​ವೊಬ್ಬರು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಸಿಡಿಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಅದು ಕೂಡ ಕ್ರೀಸ್ ಕಚ್ಚಿ ನಿಂತವನೇ ಮಹಾಶೂರ ಎಂಬಂತಿದ್ದ ಟೆಸ್ಟ್​ ಕ್ರಿಕೆಟ್​ನಲ್ಲಿ ಎಂಬುದು ಮತ್ತೊಂದು ವಿಶೇಷ. ಹೌದು, ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಜ್ಯಾಕ್ ಗ್ರೆಗೊರಿ ವಿಶ್ವ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿ ಶತಮಾನಗಳೇ ಕಳೆದಿವೆ. ಆದರೂ 100 ವರ್ಷಗಳ ಹಿಂದೆ ಅವರ ಬರೆದಿಟ್ಟ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ ಎಂದರೆ ಅವರ ಅಂದಿನ ಬ್ಯಾಟಿಂಗ್ ಶೈಲಿ ಹೇಗಿತ್ತುಎಂಬುದನ್ನು ಊಹಿಸಬಹುದು.

ಟೆಸ್ಟ್ ಕ್ರಿಕೆಟ್​ನ ಅತೀ ವೇಗದ ಶತಕದ ದಾಖಲೆ ಇರುವುದು ನ್ಯೂಜಿಲೆಂಡ್​ನ ಬ್ರೆಂಡಮ್ ಮೆಕಲಂ ಹೆಸರಿನಲ್ಲಿ. 2016 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಮೆಕಲಂ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ ಇದಕ್ಕೂ ಮುನ್ನ 100 ವರ್ಷಗಳ ಹಿಂದೆಯೇ ಗ್ರೆಗೊರಿ ಕೇವಲ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ದಾಖಲೆ 64 ವರ್ಷಗಳ ಕಾಲ ನೆಲೆ ನಿಂತಿತು. ಅಂದರೆ ಕ್ರೀಸ್ ಕಚ್ಚಿ ನಿಂತವನೇ ಸರ್ವಶ್ರೇಷ್ಠ ಬ್ಯಾಟ್ಸ್​ಮನ್ ಎನ್ನುತ್ತಿದ್ದ ಕಾಲದಲ್ಲಿ ಗ್ರೆಗೊರಿ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದು ಕೂಡ ಕೇವಲ 70 ನಿಮಿಷಗಳಲ್ಲಿ ಎಂಬುದು ವಿಶೇಷ.

ಬ್ರೆಂಡಮ್ ಮೆಕಲಂ 54 ಎಸೆತಗಳಲ್ಲಿ ಶತಕ ಪೂರೈಸಿದರೂ 79 ನಿಮಿಷಗಳನ್ನು ತೆಗೆದುಕೊಂಡಿದ್ದರು. ಆದರೆ 1921 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಜ್ಯಾಕ್ ಗ್ರೆಗೊರಿ ಕೇವಲ 70 ನಿಮಿಷಗಳ ಕಾಲ ಬ್ಯಾಟ್ ಬೀಸಿ 67 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಚೆಂಡುಗಳ ಲೆಕ್ಕಚಾರದಲ್ಲಿ ಮೆಕಲಂ, ವಿವ್ ರಿಚರ್ಡ್ಸನ್, ಮಿಸ್ಬಾಹುಲ್ ಹಕ್ ಗ್ರೆಗೊರಿ ದಾಖಲೆಯನ್ನು ಮುರಿದರೂ ನಿಮಿಷಗಳ ಲೆಕ್ಕದಲ್ಲಿ ಇದು ಇಂದಿಗೂ ವಿಶ್ವ ದಾಖಲೆಯಾಗಿ ಉಳಿದಿದೆ. ಅಂದರೆ ಕೇವಲ 70 ನಿಮಿಷಗಳ ಕಾಲ ಕ್ರೀಸ್​ನಲ್ಲಿದ್ದು, ಯಾವೊಬ್ಬ ಬ್ಯಾಟ್ಸ್​ಮನ್​ಗೂ ಕೂಡ ಜ್ಯಾಕ್ ಗ್ರೆಗೊರಿಗಿಂತ ಅತೀ ವೇಗವಾಗಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಇನ್ನು ಗ್ರೆಗೊರಿ ಹೆಲ್ಮೆಟ್, ಗ್ಲೌಸ್ ಬಳಸಿ ಕ್ರೀಸ್​ನಲ್ಲಿ ನಿಲ್ಲುತ್ತಿರಲಿಲ್ಲ. ಬರಿಗೈಯ್ಯಲ್ಲೇ ಬ್ಯಾಟಿಂಗ್ ಮಾಡುತ್ತಾ ಎದುರಾಳಿ ಬೌಲರುಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಹೀಗಾಗಿಯೇ ಗ್ರೆಗೊರಿ ಅವರ ನೂರು ವರ್ಷಗಳ ಹಿಂದಿನ ದಾಖಲೆ ಪ್ರಸ್ತುತ ದಾಖಲೆಗಿಂತ ಭಿನ್ನ ಹಾಗೂ ಸರ್ವಶ್ರೇಷ್ಠ ದಾಖಲೆ ಎಂದು ಪರಿಗಣಿಸಲಾಗುತ್ತದೆ.

ಆಸೀಸ್ ಬ್ಯಾಟ್ಸ್​ಮನ್​ ಗ್ರೆಗೊರಿಯವರ ಮತ್ತೊಂದು ವಿಶೇಷತೆಯೆಂದರೆ ಅವರ ಆಕ್ರಮಣಶೀಲತೆ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲ, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಪ್ರತಿಫಲಿಸಿರುವುದು. ಹೌದು, ಗ್ರೆಗೊರಿ ಅದ್ಭುತ ಫೀಲ್ಡರ್ ಕೂಡ ಆಗಿದ್ದರು. 1920-21ರ ಆಷಸ್ ಸರಣಿಯಲ್ಲಿ 15 ಕ್ಯಾಚ್‌ಗಳನ್ನು ಹಿಡಿದ್ದರು. ಇದು ಟೆಸ್ಟ್ ಸರಣಿಯಲ್ಲಿ ಫೀಲ್ಡರ್ (ವಿಕೆಟ್ ಕೀಪರ್ ಹೊರತುಪಡಿಸಿ) ಒಬ್ಬರು ಹಿಡಿದ ಅತೀ ಹೆಚ್ಚು ದಾಖಲೆಗೆ ಪಾತ್ರವಾಗಿದೆ. ಇನ್ನು ಬೌಲಿಂಗ್​ನಲ್ಲಿ ಬೌನ್ಸರ್​ ಮೂಲಕ ಬ್ಯಾಟ್ಸ್​ಮನ್​ಗಳನ್ನು ಕಾಡು ಕಲೆ ಕೂಡ ಗ್ರೆಗೊರಿ ಕರಗತವಾಗಿತ್ತು. ಹೀಗಾಗಿಯೇ ಗ್ರೆಗೊರಿ ಬ್ಯಾಟಿಂಗ್​ಗೆ ಇಳಿದರೆ ಬೌಲರ್ ಎದುರುತ್ತಿದ್ದರು. ಬೌಲಿಂಗ್​ಗೆ ಆಗಮಿಸಿದರೆ ಬ್ಯಾಟ್ಸ್​ಮನ್​ಗಳಿಗೆ ನಡುಕ ಶುರುವಾಗುತ್ತಿತ್ತು.

ಕ್ರಿಕೆಟ್ ಅಂಗಳದಲ್ಲಿ ಇಷ್ಟೆಲ್ಲಾ ಪರಾಕ್ರಮ ಮೆರೆದರೂ, ಜ್ಯಾಕ್ ಗ್ರೆಗೊರಿ ವೃತ್ತಿಜೀವನ ಮಾತ್ರ ದೀರ್ಘಕಾಲದವರೆಗೆ ಇರಲಿಲ್ಲ. ಆಸ್ಟ್ರೇಲಿಯಾ ಪರ ಗ್ರೆಗೊರಿ ಆಡಿದ್ದು 24 ಟೆಸ್ಟ್ ಪಂದ್ಯಗಳನ್ನು ಮಾತ್ರ. ಅದರಲ್ಲಿ ಅವರು 2 ಶತಕ ಮತ್ತು 7 ಅರ್ಧ ಶತಕಗಳ ನೆರವಿನಿಂದ 1146 ರನ್ ಗಳಿಸಿದ್ದಾರೆ. ಅದರ ಜೊತೆಗೆ 85 ವಿಕೆಟ್​ಗಳನ್ನು ಉರುಳಿಸಿದ್ದರು. ಕ್ರಿಕೆಟ್ ಅಂಗಳದಲ್ಲಿ ವೇಗಕ್ಕೆ ಹೊಸ ಅರ್ಥ ನೀಡಿದ್ದ ಜ್ಯಾಕ್ ಗ್ರೆಗೊರಿ ವೇಗವಾಗಿಯೇ ಕೆರಿಯರ್ ಅಂತ್ಯಗೊಳಿಸಿದ್ದು ಯಾಕೆ ಎಂಬುದು ಇನ್ನೂ ಕೂಡ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಅಂದಹಾಗೆ ಜ್ಯಾಕ್ ಗ್ರೆಗೊರಿ (1895-1973) ಅವರಿಗೆ ಇಂದು 126ನೇ ಹುಟ್ಟುಹಬ್ಬ. ಎನಿವೇ ಶತಮಾನಗಳ ಹಿಂದಿನ ದಾಖಲೆಯ ಸರದಾರನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಇದನ್ನೂ ಓದಿ: Ola electric scooter: ಓಲಾ ಸ್ಕೂಟರ್​ನಲ್ಲಿ ರಿವರ್ಸ್ ಗೇರ್ ಇರಲಿದೆಯಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

(Jack Gregory: 100 years ago, hit the fastest century)

Published On - 2:31 pm, Sat, 14 August 21