Lanka Premier League: ಗಾಲೆ ಗ್ಲಾಡಿಯೇಟರ್ಸ್ ಮಣಿಸಿ ಲಂಕಾ ಪ್ರೀಮಿಯರ್ ಲೀಗ್‌ ಚಾಂಪಿಯನ್ ಆದ ಜಾಫ್ನಾ ಕಿಂಗ್ಸ್

| Updated By: ಪೃಥ್ವಿಶಂಕರ

Updated on: Dec 24, 2021 | 3:24 PM

Lanka Premier League: ಅಂತಿಮ ಪಂದ್ಯದಲ್ಲಿ 41 ಎಸೆತಗಳಲ್ಲಿ 63 ರನ್ ಗಳಿಸಿದ ಅವಿಷ್ಕಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದಲ್ಲದೇ ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

Lanka Premier League: ಗಾಲೆ ಗ್ಲಾಡಿಯೇಟರ್ಸ್ ಮಣಿಸಿ ಲಂಕಾ ಪ್ರೀಮಿಯರ್ ಲೀಗ್‌ ಚಾಂಪಿಯನ್ ಆದ ಜಾಫ್ನಾ ಕಿಂಗ್ಸ್
ಜಾಫ್ನಾ ಕಿಂಗ್ಸ್
Follow us on

ಜಾಫ್ನಾ ಕಿಂಗ್ಸ್ ಲಂಕಾ ಪ್ರೀಮಿಯರ್ ಲೀಗ್‌ನ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡಿಸೆಂಬರ್ 23 ರಂದು ನಡೆದ ಫೈನಲ್‌ನಲ್ಲಿ ಗಾಲೆ ಗ್ಲಾಡಿಯೇಟರ್ಸ್ ಅನ್ನು ಸೋಲಿಸುವ ಮೂಲಕ ಜಾಫ್ನಾ ಕಿಂಗ್ಸ್ ಲಂಕಾ ಪ್ರೀಮಿಯರ್ ಲೀಗ್‌ನ ಹೊಸ ಚಾಂಪಿಯನ್ ಆಯಿತು. ಶ್ರೀಲಂಕಾದ ಟಿ20 ಲೀಗ್‌ನ ಈ ಅಂತಿಮ ಪಂದ್ಯ ತುಂಬಾ ಕುತೂಹಲಕಾರಿಯಾಗಿತ್ತು. ಇದು ಆಸಕ್ತಿದಾಯಕವಾಗಲು ಕಾರಣವೆಂದರೆ ಅದರ ಹೆಚ್ಚಿನ ಸ್ಕೋರಿಂಗ್. ಫೈನಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಸಂಚಲನ ಮೂಡಿಸಿದರು. ಅದರಲ್ಲೂ ವಿಜಯಿ ಎನಿಸಿಕೊಂಡ ಜಾಫ್ನಾ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್​ಗಳು ರನ್ ಲೂಟಿ ಮಾಡಿದರು.

ಮೊದಲು ಆಟವಾಡಿದ ಜಾಫ್ನಾ ಕಿಂಗ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 201 ರನ್ ಗಳಿಸಿತು. ಇದರಲ್ಲಿ ಎಲ್ಲರೂ ಸೇರಿ ಕೇವಲ 27 ಎಸೆತಗಳಲ್ಲಿ 132 ರನ್ ಗಳಿಸಿದರು. ಹೇಗೆ ಎಂದು ಈಗ ನೀವು ಯೋಚಿಸುತ್ತಿರಬೇಕು. ಎಲ್ಲಾ ಬ್ಯಾಟರ್​ಗಳು ಬಾರಿಸಿದ ಬೌಂಡರಿಗಳ ಒಟ್ಟು ರನ್ 132 ಆಗಿದೆ. ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದರು. ಜಾಫ್ನಾ ಕಿಂಗ್ಸ್‌ನಿಂದ, 5 ಬ್ಯಾಟ್ಸ್‌ಮನ್‌ಗಳು ಬ್ಯಾಟ್ ಮಾಡಿ ಒಟ್ಟಿಗೆ 12 ಸಿಕ್ಸರ್ ಮತ್ತು 15 ಬೌಂಡರಿಗಳನ್ನು ಹೊಡೆದರು. ಅಂದರೆ, ಸಿಕ್ಸರ್‌ಗಳಿಂದ ಒಟ್ಟು 72 ರನ್ ಮತ್ತು ಬೌಂಡರಿಗಳಿಂದ 60 ರನ್ ಗಳಿಸಲಾಯಿತು. ಈ ಮೂಲಕ 27 ಎಸೆತಗಳಲ್ಲಿ ಒಟ್ಟು 132 ರನ್‌ಗಳು ದಾಖಲಾದವು.

ರಕ್ಕಸ್ ಸೃಷ್ಟಿಸಿದ ಬ್ಯಾಟ್ಸ್‌ಮನ್‌ಗಳು!
ಜಾಫ್ನಾ ಕಿಂಗ್ಸ್‌ಗೆ ಇನ್ನಿಂಗ್ಸ್‌ನ ಆರಂಭ ಬಲಿಷ್ಠವಾಗಿತ್ತು. 23 ವರ್ಷದ ಶ್ರೀಲಂಕಾದ ಬ್ಯಾಟ್ಸ್‌ಮನ್ ಅವಿಷ್ಕಾ ಫೆರ್ನಾಂಡೋ 41 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 63 ರನ್ ಗಳಿಸಿದರು. ಮತ್ತೊಂದೆಡೆ, ಅಫ್ಘಾನಿಸ್ತಾನದ ಗುರ್ಬಾಜ್ 18 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ 35 ರನ್ ಗಳಿಸಿದರು. ಇದಲ್ಲದೇ ಇಂಗ್ಲೆಂಡ್ ಕ್ರಿಕೆಟಿಗ ಟಾಮ್ ಕೊಯ್ಲರ್ 41 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿದರು. ಪಾಕಿಸ್ತಾನದ ಶೋಯೆಬ್ ಮಲಿಕ್ ಕೂಡ 2 ಸಿಕ್ಸರ್ ಬಾರಿಸಿ 11 ಎಸೆತಗಳಲ್ಲಿ 23 ರನ್ ಗಳಿಸಿದರು. ತಂಡದ ನಾಯಕ ತಿಸಾರ ಪೆರೇರಾ 9 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 17 ರನ್ ಗಳಿಸಿ ಅಜೇಯರಾಗಿ ಉಳಿದರು.

ಗೆಲುವಿಗೆ 202 ರನ್‌ಗಳ ಗುರಿಯನ್ನು ಗಾಲೆ ಗ್ಲಾಡಿಯೇಟರ್ಸ್ ಪಡೆಯಿತು. ಈ ಗುರಿಯನ್ನು ಬೆನ್ನಟ್ಟಿದ ಗ್ಲಾಡಿಯೇಟರ್ಸ್ ಕೂಡ ಬಲವಾದ ಆರಂಭ ಮಾಡಿದರು. ಆದರೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಅವರ ತಂಡವು 178 ರನ್‌ಗಳಿಗೆ ಆಲ್​ಔಟ್ ಆಯಿತು ಮತ್ತು ಪಂದ್ಯವನ್ನು 23 ರನ್‌ಗಳಿಂದ ಕಳೆದುಕೊಂಡಿತು. ಇವರಿಬ್ಬರ ಆರಂಭಿಕ ಆಟಗಾರರು ಗಾಲೆ ಗ್ಲಾಡಿಯೇಟರ್ಸ್ ಪರ ಹೆಚ್ಚಿನ ರನ್ ಗಳಿಸಿದರು. ಗುಣತಿಲಕ 21 ಎಸೆತಗಳಲ್ಲಿ 54 ರನ್ ಮತ್ತು ಕುಸಾಲ್ ಮೆಂಡಿಸ್ 28 ಎಸೆತಗಳಲ್ಲಿ 39 ರನ್ ಗಳಿಸಿದರು. ಜಾಫ್ನಾ ಕಿಂಗ್ಸ್ ಪರ ಹಸರಂಗಾ ಮತ್ತು ಚತುರಂಗ ತಲಾ 2 ವಿಕೆಟ್ ಪಡೆದರು.

ಅವಿಷ್ಕಾ ಪಂದ್ಯ ಶ್ರೇಷ್ಠ
ಅಂತಿಮ ಪಂದ್ಯದಲ್ಲಿ 41 ಎಸೆತಗಳಲ್ಲಿ 63 ರನ್ ಗಳಿಸಿದ ಅವಿಷ್ಕಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದಲ್ಲದೇ ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಅವಿಷ್ಕಾ ಅವರು 10 ಪಂದ್ಯಗಳಲ್ಲಿ 1 ಶತಕ, 2 ಅರ್ಧ ಶತಕಗಳೊಂದಿಗೆ 312 ರನ್ ಗಳಿಸಿದರು ಮತ್ತು ಎರಡನೇ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದರು. ಟೂರ್ನಿಯಲ್ಲಿ ಏಕೈಕ ಶತಕ ಅವಿಷ್ಕಾ ಬ್ಯಾಟ್‌ನಿಂದ ಬಂದಿತ್ತು.