Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

| Updated By: ಝಾಹಿರ್ ಯೂಸುಫ್

Updated on: Aug 08, 2021 | 7:14 PM

India vs England 1st Test: ಮೊದಲ ಟೆಸ್ಟ್‌ನಲ್ಲಿ ಭಾರತೀಯ ವೇಗದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ 9 ವಿಕೆಟ್ ಉರುಳಿಸಿದರೆ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ತಲಾ 4 ವಿಕೆಟ್ ಕಬಳಿಸಿದ್ದರು.

Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ
zaheer khan-Jasprit bumrah
Follow us on

ನಾಟಿಂಗ್ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ (India vs England 1st Test) ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು 183 ರನ್​ಗಳಿಗೆ ಕಟ್ಟಿಹಾಕಿದ ಟೀಮ್ ಇಂಡಿಯಾ (Team India) ತನ್ನ ಪ್ರಥಮ ಇನಿಂಗ್ಸ್​ನ್ನು 278 ರನ್​ಗಳಿಗೆ ಅಂತ್ಯಗೊಳಿಸಿತ್ತು. ಹಾಗೆಯೇ 2ನೇ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡವನ್ನು 303 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಭಾರತದ ವೇಗಿಗಳು ಯಶಸ್ವಿಯಾಗಿದ್ದರು. ಈ ಇನಿಂಗ್ಸ್​ಗಳಲ್ಲಿ ಟೀಮ್ ಇಂಡಿಯಾ ಪರ ಮಿಂಚಿದ್ದು ಜಸ್​ಪ್ರೀತ್ ಬುಮ್ರಾ (Jasprit bumrah). ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ಉರುಳಿಸಿದ್ದ ಬುಮ್ರಾ 2ನೇ ಇನಿಂಗ್ಸ್​ನಲ್ಲಿ 5 ವಿಕೆಟ್ ಪಡೆದಿದ್ದರು. ಹೀಗೆ ಒಟ್ಟು 9 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಟಾಪ್ ಬೌಲರುಗಳ ಪಟ್ಟಿಗೆ ಬುಮ್ರಾ ಸೇರ್ಪಡೆಯಾಗಿದ್ದಾರೆ.

1986 ರಲ್ಲಿ ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾ ಮಾಜಿ ವೇಗಿ ಚೇತನ್ ಶರ್ಮಾ 188 ರನ್ ಗೆ 10 ವಿಕೆಟ್ ಪಡೆದು ಟೆಸ್ಟ್ ಪಂದ್ಯವೊಂದರಲ್ಲಿ ಆಂಗ್ಲರ ನಾಡಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆ ಬಳಿಕ ಎಡಗೈ ವೇಗಿ ಬೌಲರ್ ಜಹೀರ್ ಖಾನ್ 2007 ರಲ್ಲಿ ನಾಟಿಂಗ್ಹ್ಯಾಮ್ ನಲ್ಲಿಯೇ 134 ರನ್ ಗಳಿಗೆ 9 ವಿಕೆಟ್ ಪಡೆದು ಮಿಂಚಿದ್ದರು. ಆ ಪಂದ್ಯವನ್ನು ಭಾರತ 7 ವಿಕೆಟ್ ಗಳಿಂದ ಗೆದ್ದುಕೊಂಡಿತು. ಇದೀಗ ಜಸ್​ಪ್ರೀತ್ ಬುಮ್ರಾ ಕೂಡ 9 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ವಿಕೆಟ್ ಉರುಳಿಸಿದ ಟಾಪ್ ಬೌಲರುಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಎಡಗೈ ವೇಗಿ ಜಹೀರ್ ಖಾನ್ ನಿರ್ಮಿಸಿದ್ದ ದಾಖಲೆಯನ್ನು ಬುಮ್ರಾ ಸರಿಗಟ್ಟಿದ್ದಾರೆ.

ನಾಲ್ಕನೇ ಸ್ಥಾನಕ್ಕೇರಲಿದೆ ಭಾರತ:
ಪ್ರಸ್ತುತ ನಡೆಯುತ್ತಿರುವ ಪಂದ್ಯವು ಇಂಗ್ಲೆಂಡ್ ವಿರುದ್ಧದ ಟೀಮ್ ಇಂಡಿಯಾದ 127ನೇ ಟೆಸ್ಟ್ ಆಗಿದೆ. ಆಂಗ್ಲರ ವಿರುದ್ದದ ಇದುವರೆಗಿನ ಪ್ರದರ್ಶನದಲ್ಲಿ ಭಾರತ 29 ಟೆಸ್ಟ್‌ಗಳನ್ನು ಗೆದ್ದಿದ್ದರೆ, 48 ರಲ್ಲಿ ಸೋತಿದೆ. ಇನ್ನು 49 ಟೆಸ್ಟ್​ಗಳನ್ನು ಡ್ರಾ ಮಾಡಿಕೊಂಡಿದೆ. ನಾಟಿಂಗ್ಹ್ಯಾಮ್‌​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ಇಂಗ್ಲೆಂಡ್ ವಿರುದ್ಧದ ಭಾರತದ 30ನೇ ಗೆಲುವಾಗಿದೆ. ಈ ಮೊದಲು ಕೇವಲ ಮೂರು ತಂಡಗಳು ಮಾತ್ರ ಇಂಗ್ಲೆಂಡಿನ ವಿರುದ್ಧ 30 ಕ್ಕೂ ಹೆಚ್ಚು ಟೆಸ್ಟ್‌ಗಳನ್ನು ಗೆದ್ದಿದ್ದವು. ಆಸ್ಟ್ರೇಲಿಯಾ 146 ಪಂದ್ಯಗಳನ್ನು ಗೆಲ್ಲುವ ಈ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ 58 ಮತ್ತು ದಕ್ಷಿಣ ಆಫ್ರಿಕಾ 34 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇದೀಗ ಭಾರತ ಗೆದ್ದರೆ ಇಂಗ್ಲೆಂಡ್ ವಿರುದ್ದ ಟೆಸ್ಟ್​ನಲ್ಲಿ ಪಾರುಪತ್ಯ ಸಾಧಿಸಿದ ನಾಲ್ಕನೇ ತಂಡ ಎನಿಸಿಕೊಳ್ಳಲಿದೆ.

ವೇಗಿಗಳ ಭರ್ಜರಿ ಪ್ರದರ್ಶನ:
ಮೊದಲ ಟೆಸ್ಟ್‌ನಲ್ಲಿ ಭಾರತೀಯ ವೇಗದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ 9 ವಿಕೆಟ್ ಉರುಳಿಸಿದರೆ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ತಲಾ 4 ವಿಕೆಟ್ ಕಬಳಿಸಿದ್ದರು. ಹಾಗೆಯೇ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಹಿಂದೆ 2018 ರಲ್ಲಿ, ನಾಟಿಂಗ್ಹ್ಯಾಮ್‌ನಲ್ಲಿಯೇ ಭಾರತೀಯ ಬೌಲರ್‌ಗಳು 19 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಇದೀಗ 20 ವಿಕೆಟ್ ಉರುಳಿಸುವ ಮೂಲಕ ಟೀಮ್ ಇಂಡಿಯಾ ವೇಗಿಗಳು ಸಂಚಲನ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: Health Tips: ಕೊತ್ತಂಬರಿ ನೆನೆಸಿದ ನೀರು ಕುಡಿದ್ರೆ ಸಿಗುವ ಆರೋಗ್ಯಕರ ಪ್ರಯೋಜನ ಒಂದಾ ಎರಡಾ..!

ಇದನ್ನೂ ಓದಿ: Health Tips: ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಇದನ್ನೂ ಓದಿ: Tokyo Olympics 2020: ಭಾರತ ಸೋಲುತ್ತಿದ್ದಂತೆ ರೆಫರಿಗೆ ಬಿತ್ತು ಏಟು..!

ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್​ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್

Published On - 7:10 pm, Sun, 8 August 21