Tokyo Olympics 2020: ಭಾರತ ಸೋಲುತ್ತಿದ್ದಂತೆ ರೆಫರಿಗೆ ಬಿತ್ತು ಏಟು..!
ಈ ಪಂದ್ಯದಲ್ಲಿ ದೀಪಕ್ ಪುನಿಯಾ ಮೊದಲ ಸುತ್ತಿನಲ್ಲಿ 2-1 ಮುನ್ನಡೆ ಸಾಧಿಸಿದರು. ಅವರು ಎರಡನೇ ಸುತ್ತಿನಲ್ಲೂ ಈ ಮುನ್ನಡೆಯನ್ನು ಕಾಯ್ದುಕೊಂಡರು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ಅಹಿತಕರ ಘಟನೆಯೊಂದು ನಡೆದಿದೆ. ಭಾರತದ ಕುಸ್ತಿಪಟು ದೀಪಕ್ ಪುನಿಯಾ ವಿದೇಶಿ ತರಬೇತುದಾರ ಮುರಾದ್ ಗೈಡಾರೋವ್ ಅವರು ಮ್ಯಾಚ್ ರೆಫರಿ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಯಾನ್ ಮರಿನೋಸ್ನ ಮೈಲ್ಸ್ ನಜೀಮ್ ಅಮೀನ್ ವಿರುದ್ದ ನಡೆದ ಪಂದ್ಯದ ವೇಳೆ ದೀಪಕ್ ಪುನಿಯಾ ಸೋಲನುಭವಿಸಿದ್ದರು. ಈ ಪಂದ್ಯದಲ್ಲಿ ಗೆದ್ದಿದ್ದರೆ ಭಾರತಕ್ಕೆ ಕಂಚಿನ ಪದಕ ಲಭಿಸುತ್ತಿತ್ತು. ಆದರೆ ಪಂದ್ಯದ ವೇಳೆ ರೆಫರಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೋಚ್ ಮುರಾದ್ ಗೈಡಾರೋಮ್ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಗೈಡಾರೋಮ್ ಅವರನ್ನು ಹೊರಹಾಕಿದರು. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಈ ಪ್ರಕರಣದ ವಿಚಾರಣೆ ನಡೆಸಿ ಗೈಡಾರೋವ್ ಅವರ ಒಲಿಂಪಿಕ್ಸ್ ಮಾನ್ಯತೆಯನ್ನು ರದ್ದುಗೊಳಿಸಿದರು.
“ಭಾರತೀಯ ಕುಸ್ತಿ ತಂಡದ ವಿದೇಶಿ ಸಹಾಯಕ ತರಬೇತುದಾರ ಮುರಾದ್ ಗೈಡಾರೋವ್ ಅವರು ಮ್ಯಾಚ್ ರೆಫರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಟೋಕಿಯೊ ಒಲಿಂಪಿಕ್ ಗ್ರಾಮದಿಂದ ತಕ್ಷಣವೇ ಹಿಂತೆಗೆದುಕೊಳ್ಳಲಾಗಿದೆ. ಹಾಗೆಯೇ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ” ಎಂದು ಐಒಎ ಕಾರ್ಯದರ್ಶಿ ಜನರಲ್ ರಾಜೀವ್ ಮೆಹ್ತಾ ಟ್ವೀಟ್ ಮಾಡಿದ್ದಾರೆ.
2018 ರ ಜೂನಿಯರ್ ವಿಶ್ವ ಚಾಂಪಿಯನ್‌ಗೆ ತರಬೇತಿ ನೀಡಲು ಮುರಾದ್ ಗೈಡಾರೋವ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ನಿಯೋಜಿಸಿತ್ತು. ಅಲ್ಲದೆ ಕಳೆದ ಕೆಲ ವರ್ಷಗಳಿಂದ ದೀಪಕ್ ಪುನಿಯಾಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಹಿಂದೆ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬೆಲಾರಸ್ ಅನ್ನು ಪ್ರತಿನಿಧಿಸಿ ಗೈಡಾರೋವ್ ಬೆಳ್ಳಿ ಪದಕ ಗೆದ್ದಿದ್ದರು. ಹೀಗಾಗಿ ಈ ಸಲ ದೀಪಕ್ ಪುನಿಯಾ ಅವರು ಕೂಡ ಪದಕ ಗೆಲ್ಲುವ ನಿರೀಕ್ಷೆಯಿತ್ತು.
ಈ ಪಂದ್ಯದಲ್ಲಿ ದೀಪಕ್ ಪುನಿಯಾ ಮೊದಲ ಸುತ್ತಿನಲ್ಲಿ 2-1 ಮುನ್ನಡೆ ಸಾಧಿಸಿದರು. ಅವರು ಎರಡನೇ ಸುತ್ತಿನಲ್ಲೂ ಈ ಮುನ್ನಡೆಯನ್ನು ಕಾಯ್ದುಕೊಂಡರು. ಆದರೆ, ಕೊನೆಯದಾಗಿ 10 ಸೆಕೆಂಡುಗಳು ಉಳಿದಿರುವಾಗ, ಸ್ಯಾನ್ ಮರಿನೋಸ್ನ ಕುಸ್ತಿಪಟು ಮೈಲ್ಸ್ ಅಮಿನ್ ಆಡಿದ ಆಕ್ರಮಣಕಾರಿ ಆಟದ ಮುಂದೆ ದೀಪಕ್ ಎಡವಿದರು. ಅದರಲ್ಲೂ ಕೊನೆಯ ನಿಮಿಷಗಳಲ್ಲಿ ಮಾಡಿಕೊಂಡ ಸಣ್ಣ ಪುಟ್ಟ ತಪ್ಪುಗಳಿಂದ 4-2 ಅಂತರದಿಂದ ಸೋಲಬೇಕಾಯ್ತು.
ಇದನ್ನೂ ಓದಿ: Neeraj Chopra: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕಿದು 2ನೇ ಚಿನ್ನದ ಪದಕ
ಇದನ್ನೂ ಓದಿ: Tokyo Olympics 2020: ಒಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆ ಮಾಡಿದ ಭಾರತ
Published On - 10:57 pm, Sat, 7 August 21