
ಐಸಿಸಿ ಚಾಂಪಿಯನ್ಸ್ ಟ್ರೋಫಿ ಇದೇ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಈ ಟೂರ್ನಿಗೆ ಎಲ್ಲ ತಂಡಗಳನ್ನೂ ಪ್ರಕಟಿಸಲಾಗಿದೆ. ಇತ್ತೀಚೆಗಷ್ಟೇ ಬಿಸಿಸಿಐ ಕೂಡ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಇದರಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಸರೂ ಸೇರಿದೆ. ಆದರೆ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಸ್ಪ್ರೀತ್ ಬುಮ್ರಾ ಆಡುತ್ತಾರಾ ಅಥವಾ ಇಲ್ಲವಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ವಾಸ್ತವವಾಗಿ, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಗಾಯಗೊಂಡಿದ್ದ ಬುಮ್ರಾ ಅಂದಿನಿಂದ ತಂಡದಿಂದ ಹೊರಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಏತನ್ಮಧ್ಯೆ, ಬುಮ್ರಾ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.
ಜಸ್ಪ್ರೀತ್ ಬುಮ್ರಾ ಪ್ರಸ್ತುತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬುಮ್ರಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮನಿಸಿದ್ದು ಕನಿಷ್ಠ ಮೂರು ದಿನಗಳ ಕಾಲ ಇಲ್ಲಿಯೇ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಈ ಸಮಯದಲ್ಲಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುವ ಜಸ್ಪ್ರೀತ್ ಬುಮ್ರಾಗೆ ಇಲ್ಲಿಯೇ ಸ್ಕ್ಯಾನ್ ಕೂಡ ಮಾಡಲಾಗುತ್ತದೆ. ಇದರ ನಂತರ, ಸೆಂಟರ್ ಆಫ್ ಎಕ್ಸಲೆನ್ಸ್‌ನ ತಜ್ಞರು ತಮ್ಮ ವರದಿಯನ್ನು ರಾಷ್ಟ್ರೀಯ ಆಯ್ಕೆ ಸಮಿತಿಗೆ ಸಲ್ಲಿಸುತ್ತಾರೆ. ಬುಮ್ರಾ ವೈದ್ಯಕೀಯ ತಂಡದಿಂದ ಕ್ಲೀನ್ ಚಿಟ್ ಪಡೆದರೆ ಮಾತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಸಾಧ್ಯವಾಗುತ್ತದೆ.
ಇನ್ನು ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ಸಮಯದಲ್ಲಿ ಮಾತನಾಡಿದ್ದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ‘ಬುಮ್ರಾ ಅವರಿಗೆ ಐದು ವಾರಗಳ ಕಾಲ ವಿಶ್ರಾಂತಿ ನೀಡಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ ಎಂದು ಹೇಳಿದ್ದರು. ಅಂದರೆ, ಬುಮ್ರಾ ಬೇಗ ಚೇತರಿಸಿಕೊಂಡರೆ ಸರಣಿಯ ಕೊನೆಯ ಪಂದ್ಯದಲ್ಲಿ ಆಡಬಹುದು. ಅಥವಾ ನೇರವಾಗಿ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಬಹುದು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಎರಡನೇ ದಿನದಂದು, ಜಸ್ಪ್ರೀತ್ ಬುಮ್ರಾ ಇದ್ದಕ್ಕಿದ್ದಂತೆ ಮೈದಾನದಿಂದ ನಿರ್ಗಮಿಸಿದ್ದರು. ಇದಾದ ನಂತರ ಅವರನ್ನು ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ವಾಸ್ತವವಾಗಿ ಬುಮ್ರಾ ಈ ಸಮಸ್ಯೆಗೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಕೂಡ ಬುಮ್ರಾ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಕ್ಕೂ ಮುನ್ನ ಜೂನ್ 2022 ರಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ ದೀರ್ಘಕಾಲ ಮೈದಾನದಿಂದ ಹೊರಗುಳಿದಿದ್ದರು. ಇದೀಗ ಮತ್ತದೇ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಬೇಗ ಚೇತರಿಸಿಕೊಂಡು ಮೈದಾನಕ್ಕಿಳಿಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Mon, 3 February 25