Sanju Samson: ಸಂಜು ಸ್ಯಾಮ್ಸನ್ ಕೈಗೆ ಗಾಯ; ಕ್ರಿಕೆಟ್‌ನಿಂದ ಕೆಲವು ವಾರ ದೂರ, ರಣಜಿಗೂ ಅಲಭ್ಯ
Sanju Samson injury: ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದಿದೆ. ಆದರೆ, ಈ ಸರಣಿಯ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಸಂಜು ಸ್ಯಾಮ್ಸನ್ ಅವರ ಬಲಗೈ ತೋರುಬೆರಳಿಗೆ ಗಂಭೀರ ಗಾಯವಾಗಿದೆ. ಬಿಸಿಸಿಐ ವರದಿಯ ಪ್ರಕಾರ, ಅವರು 5-6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ. ಈ ಗಾಯದಿಂದ ಸಂಜು ರಣಜಿ ಟ್ರೋಫಿಗೂ ಗೈರಲಾಗಲಿದ್ದಾರೆ.

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನೂ ಅದ್ಭುತವಾಗಿ ಅಂತ್ಯಗೊಳಿಸಿದೆ. ಮುಂಬೈನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ ಆಧಾರದ ಮೇಲೆ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 150 ರನ್ ಗಳಿಂದ ಸೋಲಿಸಿ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಆದರೆ ಈ ವಿಜಯದ ನಡುವೆಯೂ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದು, ಮುಂದಿನ ಕೆಲವು ವಾರಗಳವರೆಗೆ ಮೈದಾನದಿಂದ ಹೊರಗುಳಿಯಲಿದ್ದಾರೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಸಂಜು ಕೈಬೆರಳಿಗೆ ಗಾಯ
ಫೆಬ್ರವರಿ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಸ್ಯಾಮ್ಸನ್ ಬ್ಯಾಟಿಂಗ್ ಮಾಡುವ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದರು. ವಾಸ್ತವವಾಗಿ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ್ದ ಸಂಜು, ಜೋಫ್ರಾ ಆರ್ಚರ್ ಅವರ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆದರೆ ಆ ಓವರ್ನ ಮೂರನೇ ಎಸೆತ ನೇರವಾಗಿ ಸಂಜು ಅವರ ಕೈಗವಸುಗಳಿಗೆ ತಗುಲಿತು, ಇದರಿಂದಾಗಿ ಅವರ ಬೆರಳಿಗೆ ಗಾಯವಾಯಿತು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕಿಳಿದು ಕೆಲಕಾಲ ತಪಾಸಣೆ ನಡೆಸಿ ಸ್ವಲ್ಪ ಮಟ್ಟಿಗೆ ನೋವನ್ನು ಕಡಿಮೆ ಮಾಡಿದರು. ಆ ಬಳಿಕವೂ ಬ್ಯಾಟಿಂಗ್ ಮುಂದುವರೆಸಿದ್ದ ಸಂಜು ಮುಂದಿನ ಓವರ್‌ನಲ್ಲಿಯೇ ಔಟಾದರು.
ಆದರೆ, ಆ ಸಮಯದಲ್ಲಿ ಅವರ ಗಾಯವು ಅಷ್ಟೊಂದು ಗಂಭೀರವಾಗಿಲ್ಲ ಎಂದು ತೋರುತ್ತಿತ್ತು. ಆದರೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕಿಳಿಯದಿದ್ದಾಗ ಸಂಜುಗೆ ಗಂಭೀರವಾಗಿ ಗಾಯವಾಗಿದೆ ಎಂದು ಖಚಿತವಾಗಿತ್ತು. ಹೀಗಾಗಿ ಅವರ ಸ್ಥಾನದಲ್ಲಿ, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ಇದೀಗ ಸುದ್ದಿ ಸಂಸ್ಥೆ ಪಿಟಿಐ ವರದಿಯು ಸ್ಯಾಮ್ಸನ್ ಅವರ ಬಲಗೈ ತೋರುಬೆರಳು ಮುರಿದಿದೆ. ಸ್ಯಾಮ್ಸನ್ ಅವರ ಬೆರಳನ್ನು ಸ್ಕ್ಯಾನ್ ಮಾಡಲಾಗಿದ್ದು, ಬೆರಳು ಮುರಿದಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.
5-6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ
ಹೀಗಾಗಿ ಸ್ಯಾಮ್ಸನ್ ಈಗ ಸುಮಾರು 5-6 ವಾರಗಳ ಕಾಲ ಕ್ರಿಕೆಟ್ ಆಕ್ಷನ್‌ನಿಂದ ದೂರವಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಅವರು ತಿರುವನಂತಪುರಂನಲ್ಲಿರುವ ತಮ್ಮ ಮನೆಗೆ ಮರಳಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ದಾಖಲಾಗಲಿದ್ದಾರೆ. ಇಲ್ಲಿ ಅವರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯಲ್ಲಿದ್ದು, ಅಲ್ಲಿಂದ ಅನುಮತಿ ಪಡೆದ ನಂತರವೇ ಕ್ರಿಕೆಟ್‌ಗೆ ಮರಳಲಿದ್ದಾರೆ. ಈ ಗಾಯದ ಪರಿಣಾಮ ಸ್ಯಾಮ್ಸನ್, ಫೆಬ್ರವರಿ 8 ರಿಂದ 12 ರವರೆಗೆ ನಡೆಯಲಿರುವ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳದ ಪರವಾಗಿ ಮೈದಾನಕ್ಕಿಳಿಯಲು ಸಾಧ್ಯವಿಲ್ಲ.
ಅಷ್ಟೇ ಅಲ್ಲ, ಚಾಂಪಿಯನ್ಸ್ ಟ್ರೋಫಿಗೆ ಲಗ್ಗೆ ಇಡುವ ಅವರ ನಿರೀಕ್ಷೆಯೂ ಹುಸಿಯಾಗಿದೆ. ವಾಸ್ತವವಾಗಿ ಈಗ ಪ್ರಕಟವಾಗಿರುವ ತಂಡದಲ್ಲಿ ಸ್ಯಾಮ್ಸನ್ ಸ್ಥಾನ ಪಡೆದಿಲ್ಲ. ಆದರೆ ವಿಕೆಟ್ ಕೀಪರ್ ರಿಷಬ್ ಪಂತ್ ಅಥವಾ ಕೆಎಲ್ ರಾಹುಲ್ ಗಾಯಗೊಂಡರೆ, ಸ್ಯಾಮ್ಸನ್ ಮತ್ತೊಂದು ಆಯ್ಕೆಯಾಗಿದ್ದರು. ಇದೀಗ ಸ್ಯಾಮ್ಸನ್ ಗಾಯಗೊಂಡಿರುವುದರಿಂದ ಅವರು ಆಯ್ಕೆಗೆ ಲಭ್ಯರಿರುವುದಿಲ್ಲ. ಆದಾಗ್ಯೂ, ಐಪಿಎಲ್ ಆರಂಭಕ್ಕೂ ಮೊದಲು ಅವರು ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ