ನಾನು ವೃತ್ತಿಜೀವನದಲ್ಲಿ ಬಾರಿಸಿದ ಸಿಕ್ಸ್​ಗಳಿಗಿಂತ ಅಧಿಕ ಸಿಕ್ಸ್​ಗಳನ್ನು ಅಭಿಷೇಕ್ 2 ಗಂಟೆಯಲ್ಲೇ ಸಿಡಿಸಿದ್ರು: ಅಲೆಸ್ಟರ್ ಕುಕ್

India vs England, 5th T20I: ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 135 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್​ ನಡುವೆ ಅಭಿಷೇಕ್ ಶರ್ಮಾ ಬ್ಯಾಟ್​ನಿಂದ ಮೂಡಿಬಂದಿರುವುದು 7 ಫೋರ್​ ಹಾಗೂ 13 ಸಿಕ್ಸರ್​ಗಳು. ಈ ಸಿಕ್ಸರ್​ಗಳ ಸುರಿಮಳೆಯನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟರ್ ಕುಕ್ ಹಾಡಿಹೊಗಳಿದ್ದಾರೆ.

ನಾನು ವೃತ್ತಿಜೀವನದಲ್ಲಿ ಬಾರಿಸಿದ ಸಿಕ್ಸ್​ಗಳಿಗಿಂತ ಅಧಿಕ ಸಿಕ್ಸ್​ಗಳನ್ನು ಅಭಿಷೇಕ್ 2 ಗಂಟೆಯಲ್ಲೇ ಸಿಡಿಸಿದ್ರು: ಅಲೆಸ್ಟರ್ ಕುಕ್
Alastair Cook - Abhishek Sharma
Follow us
ಝಾಹಿರ್ ಯೂಸುಫ್
|

Updated on: Feb 03, 2025 | 12:58 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸಿಕ್ಸರ್​ಗಳ ಸುರಿಮಳೆಗೈದಿದ್ದರು. ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಸಿಕ್ಸ್​ಗಳ ಮೇಲೆ ಸಿಕ್ಸ್ ಸಿಡಿಸುತ್ತಾ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ಬಳಿಕ 20 ಎಸೆತಗಳನ್ನು ಎದುರಿಸಿ ಕೇವಲ 37 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದರು.

ಇತ್ತ ಅಭಿಷೇಕ್ ಶರ್ಮಾ ಸಿಕ್ಸ್​ಗಳ ಸುರಿಮಳೆಗೈಯ್ಯುತ್ತಿದ್ದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟರ್ ಕುಕ್ ಕಾಮೆಂಟ್ರಿ ಬಾಕ್ಸ್​ನಲ್ಲಿ ಕೂತು ಟೀಮ್ ಇಂಡಿಯಾ ಯುವ ದಾಂಡಿಗನ ಆಟಕ್ಕೆ ಬಹುಪರಾಕ್ ಅಂದಿದ್ದರು. ಅದು ಸಹ ತನ್ನ ವೃತ್ತಿಜೀವನವನ್ನು ಹೀಯಾಳಿಸುವ ಮೂಲಕ ಎಂಬುದು ವಿಶೇಷ.

ಅಭಿಷೇಕ್ ಶರ್ಮಾ ಅವರ ಸಿಕ್ಸ್​ಗಳ ಅಬ್ಬರ ನೋಡಿದ ಅಲೆಸ್ಟರ್ ಕುಕ್, ನಾನು ಇಡೀ ವೃತ್ತಿಜೀವನದಲ್ಲಿ ಬಾರಿಸಿದ ಸಿಕ್ಸ್​ಗಿಂತ ಅಧಿಕ ಸಿಕ್ಸ್​ಗಳನ್ನು ಅಭಿಷೇಕ್ ಕೇವಲ 2 ಗಂಟೆಗಳಲ್ಲಿ ಬಾರಿಸಿದ್ದಾರೆ. ನನ್ನ ಪ್ರಕಾರ ಇದೊಂದು ಅದ್ಭುತ ಇನಿಂಗ್ಸ್​ ಎಂದು ಟೀಮ್ ಇಂಡಿಯಾ ದಾಂಡಿಗನನ್ನು ಕುಕ್ ಕೊಂಡಾಡಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಅಲೆಸ್ಟರ್ ಕುಕ್ ತಮ್ಮ ವೃತ್ತಿಜೀವನದಲ್ಲಿ ಬಾರಿಸಿರುವುದು ಕೇವಲ 21 ಸಿಕ್ಸ್​ಗಳನ್ನು ಮಾತ್ರ. ಇಂಗ್ಲೆಂಡ್​ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಕುಕ್ 291 ಟೆಸ್ಟ್ ಇನಿಂಗ್ಸ್​ಗಳಲ್ಲಿ 11 ಸಿಕ್ಸ್ ಮಾತ್ರ ಬಾರಿಸಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಡೇವಿಡ್ ವಾರ್ನರ್

ಇನ್ನು 92 ಏಕದಿನ ಪಂದ್ಯಗಳನ್ನಾಡಿರುವ ಅವರು 10 ಸಿಕ್ಸ್ ಬಾರಿಸಿದ್ದಾರೆ. ಹಾಗೆಯೇ 4 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದರೂ ಕುಕ್ ಒಂದೇ ಸಿಕ್ಸ್ ಸಿಡಿಸಿಲ್ಲ. ಅಂದರೆ ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಅಲೆಸ್ಟರ್ ಕುಕ್ ಬ್ಯಾಟ್​ನಿಂದ ಮೂಡಿಬಂದಿರುವುದು ಕೇವಲ 10 ಸಿಕ್ಸ್​ಗಳು ಮಾತ್ರ. ಇದೇ ಕಾರಣದಿಂದಾಗಿ ತಾನು ವೃತ್ತಿಜೀವನದಲ್ಲಿ ಬಾರಿಸಿದ್ದಕ್ಕಿಂತ ಅಧಿಕ ಸಿಕ್ಸ್​ಗಳನ್ನು ಅಭಿಷೇಕ್ ಶರ್ಮಾ ಅವರು 2 ಗಂಟೆಗಳಲ್ಲಿ ಸಿಡಿಸಿದ್ದಾರೆ ಎಂದು ಅಲೆಸ್ಟರ್ ಕುಕ್ ಹಾಡಿ ಹೊಗಳಿದ್ದಾರೆ.

ಅಭಿಷೇಕ್ ಶರ್ಮಾ ಬ್ಯಾಟಿಂಗ್ ವಿಡಿಯೋ:

ಇನ್ನು ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 13 ಸಿಕ್ಸ್ ಸಿಡಿಸುವ ಮೂಲಕ ಟೀಮ್ ಇಂಡಿಯಾ ಪರ ಟಿ20 ಇನಿಂಗ್ಸ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.