ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬೆಟ್ಟದಂತಹ ಮೊತ್ತ ಕಲೆಹಾಕಿದರೂ ಭಾರತ (India vs Australia) ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. 208 ರನ್ ಗಳಿಸಿದರೂ ಗೆಲುವು ಕಾಣಲು ವಿಫಲವಾಯಿತು. ಬೌಲಿಂಗ್ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ರೋಹಿತ್ (Rohit Sharma) ಪಡೆ ಸೋಲು ಕಾಣಬೇಕಾಯಿತು. ಸ್ವತಃ ಟೀಮ್ ಇಂಡಿಯಾದ ಸ್ಟಾರ್ ಬೌಲರ್ಗಳಾದ ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್ ಅವರೇ ದುಬಾರಿ ಆದರು. ಟಿ20 ವಿಶ್ವಕಪ್ಗೆ ಕೆಲವೇ ದಿನವಿರುವಾಗ ಭಾರತೀಯ ಬೌಲರ್ಗಳ ಈ ಕಳಪೆ ಪ್ರದರ್ಶನ ಬಿಸಿಸಿಐಗೆ (BCCI) ತಲೆನೋವಾಗಿ ಪರಿಣಮಿಸಿದೆ. ಇದರ ನಡುವೆ ನಾಳೆ (ಸೆ. 23) ನಾಗ್ಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ದ್ವಿತೀಯ ಟಿ20 ಕದನ ನಡೆಯಲಿದೆ. ಇದಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ತರಲು ಮ್ಯಾನೇಜ್ಮೆಂಟ್ ಮುಂದಾಗಿದೆ.
ಇಂಜುರಿಯಿಂದಾಗಿ ಬಹುದಿನಗಳ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅವರನ್ನು ಎರಡನೇ ಟಿ20 ಯಲ್ಲಿ ಕಣಕ್ಕಿಳಿಸಲು ಬಿಸಿಸಿಐ ಮುಂದಾಗಿದೆ. ಶೇ. 100 ರಷ್ಟು ಫಿಟ್ ಇರದ ಕಾರಣ ಬುಮ್ರಾ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಕಣಕ್ಕಿಳಿಯಲು ತಯಾರಾಗಿರುವ ಇವರು ಉಮೇಶ್ ಯಾದವ್ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬುಮ್ರಾ ಆಡದ ಕಳೆದ ಐದು ಪಂದ್ಯಗಳ ಪೈಕಿ ಭಾರತ ಮೂರರಲ್ಲಿ ಸೋಲು ಕಂಡಿದೆ. ಈಗ ಇವರ ಕಮ್ಬ್ಯಾಕ್ ತಂಡದ ಬೌಲಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸುವುದು ಖಚಿತ.
ಇನ್ನು ದ್ವಿತೀಯ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾದಲ್ಲೂ ಬದಾವಣೆ ಆದರೆ ಅಚ್ಚರಿ ಪಡಬೇಕಿಲ್ಲ. ದಿನೇಶ್ ಕಾರ್ತಿಕ್ಗೆ ಸರಿಯಾದ ಸ್ಥಾನ ಸಿಗುತ್ತಿಲ್ಲ. ಸಿಕ್ಕ ಸ್ಥಾನದಲ್ಲಿ ಅವರು ಕೆಲ ಪಂದ್ಯಗಳಲ್ಲಿ ವೈಫಲ್ಯ ಕೂಡ ಅನುಭವಿಸುತ್ತಿದ್ದಾರೆ. ಹೀಗಾಗಿ ಇವರ ಜಾಗದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅಕ್ಷರ್ ಪಟೇಲ್ ಬಿಟ್ಟರೆ ಎಡಗೈ ಬ್ಯಾಟರ್ ಮತ್ಯಾರು ಇಲ್ಲ. ಪಂತ್ ಬಂದರೆ ತಂಡಕ್ಕೆ ಇದುಕೂಡ ಒಂದು ಪ್ಲಸ್ ಪಾಯಿಂಟ್ ಆಗಲಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದರೆ, ಆಸ್ಟ್ರೇಲಿಯಾ ಈ ತಾಣದಲ್ಲಿ ಈವರೆಗೆ ಒಂದೂ ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ವಾತಾವರಣ ಭಾರತಕ್ಕೆ ಪ್ಲಸ್ ಆದರೂ ಆಗಬಹುದು. ಇನ್ನು ನಾಗ್ಪುರ ಪಿಚ್ ಸಾಮಾನ್ಯವಾಗಿ ಬ್ಯಾಟ್ ಮತ್ತು ಬಾಲ್ ನಡುವೆ ಸ್ವಲ್ಪ ಸಮತೋಲನವನ್ನು ಹೊಂದಿರುತ್ತದೆ. ಆದರೆ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡುವುದು ಕಠಿಣ ಎಂಬುದು ಹಿಂದಿನ ದಾಖಲೆಗಳು ಹೇಳುತ್ತಿವೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
Published On - 9:35 am, Thu, 22 September 22