
ಭಾರತ ಹಾಗೂ ಶ್ರೀಲಂಕಾ ( India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇದೇ ಆಗಸ್ಟ್ 15 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ (Team India) ಇನ್ನೇರಡು ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಏಕೆಂದರೆ ಈ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ, ಶ್ರೀಲಂಕಾದ ಸ್ಥಳೀಯ ತಂಡದ ವಿರುದ್ಧ ಆಗಸ್ಟ್ 6 ರಿಂದ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಸರಣಿಗಾಗಿ ಈಗಾಗಲೇ ತಂಡವನ್ನು ಸಹ ಪ್ರಕಟಿಸಲಾಗಿದೆ. ಈ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾರನ್ನು (Jasprit Bumrah) ಸಹ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವಾಗ ಜಸ್ಪ್ರೀತ್ ಬುಮ್ರಾ ಅವರ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದ ಆಯ್ಕೆ ಸಮಿತಿ, ಶ್ರೀಲಂಕಾ ಪ್ರವಾಸಕ್ಕೆ ಬುಮ್ರಾರನ್ನು ಆಯ್ಕೆ ಮಾಡಲಾಗಿದೆಯಾದರೂ ಆಡುವ ಹನ್ನೊಂದರ ಬಳಗದಲ್ಲಿ ಅವರಿಗೆ ಸ್ಥಾನ ನೀಡುವುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿರಲಿದೆ ಎಂದಿತ್ತು. ಇದಕ್ಕೆ ಪೂರಕವಾಗಿ ಬುಮ್ರಾ ಇಂಜುರಿಯಿಂದ ಚೇತರಿಸಿಕೊಂಡು ಎನ್ಸಿಎ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ಶ್ರೀಲಂಕಾ ಪ್ರವಾಸಕ್ಕೆ ಲಭ್ಯರಿದ್ದಾರೆ ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು.
ಆದರೆ ಸರಣಿಗೆ ತಂಡ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನವೇ ಜಸ್ಪ್ರೀತ್ ಬುಮ್ರಾ ಈ ಸರಣಿಗೆ ಅಲಭ್ಯತೆರಾಗಲಿದ್ದಾರೆ ಎಂಬ ಸುದ್ದಿ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಮಾಹಿತಿ ಪ್ರಕಾರ, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಆರಂಭಿಕ ಪರೀಕ್ಷೆಯಲ್ಲಿ ಬುಮ್ರಾ ಅವರ ಎಡ ಮೊಣಕಾಲಿನಲ್ಲಿ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ವೈದ್ಯಕೀಯ ತಂಡವು ಬುಮ್ರಾರನ್ನು ಶ್ರೀಲಂಕಾಕ್ಕೆ ಕಳುಹಿಸುವ ಬದಲು ಪೂರ್ಣಾವಧಿಯ ಚೇತರಿಕೆಗೆ ಒಳಗಾಗುವಂತೆ ಸಲಹೆ ನೀಡಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ 11 ಪ್ರಕಟಿಸಿದ ಆರ್ ಅಶ್ವಿನ್
ಹೀಗಾಗಿ ಬುಮ್ರಾ ಅವರ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಆದ್ದರಿಂದ, ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕಾಲಾವಕಾಶ ನೀಡಲು ಬಿಸಿಸಿಐ ಚಿಂತಿಸಿದೆ. ಏಕೆಂದರೆ ಈ ವರ್ಷ ಇನ್ನೂ ಸಾಕಷ್ಟು ಕ್ರಿಕೆಟ್ ಆಡಬೇಕಾಗಿದೆ. ಟೆಸ್ಟ್ ಸರಣಿ ಬಳಿಕ ಟೀಂ ಇಂಡಿಯಾ ಏಷ್ಯನ್ ಗೇಮ್ಸ್, ನ್ಯೂಜಿಲೆಂಡ್ ಪ್ರವಾಸ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಡಬೇಕಿದೆ. ಈ ಸರಣಿಗೆ ಬುಮ್ರಾ ಅವರ ಅವಶ್ಯಕತೆ ತಂಡಕ್ಕಿದೆ ಎಂದು ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ ಎಂದು ವರದಿಯಾಗಿದೆ.
Published On - 2:26 pm, Sun, 2 August 26