
ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ವಾ? ಈ ಪ್ರಶ್ನೆಗೆ ಸದ್ಯ ಸ್ಪಷ್ಟ ಉತ್ತರವಿಲ್ಲ. ಆದರೆ ಅವರು ಇನ್ನುಳಿದ 4 ಪಂದ್ಯಗಳಲ್ಲಿ ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಜಸ್ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನಾಡುವುದು ಅನುಮಾನ ಎನ್ನಲಾಗಿತ್ತು. ಅಲ್ಲದೆ ಸರಣಿ ನಡುವೆ ಎರಡು ಪಂದ್ಯಗಳ ವೇಳೆ ವಿಶ್ರಾಂತಿ ನೀಡುವ ಬಗ್ಗೆ ವರದಿಯಾಗಿಗಳಾಗಿದ್ದವು. ಅದರಂತೆ ಇದೀಗ ಬುಮ್ರಾ ಇನ್ನುಳಿದ ನಾಲ್ಕು ಮ್ಯಾಚ್ಗಳಲ್ಲಿ ಎರಡರಿಂದ ಹೊರಗುಳಿಯಲಿದ್ದಾರೆ.
ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಸಮಸ್ಯೆಯ ಕಾರಣ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಇತ್ತ ಬುಮ್ರಾ ಅವರ ಅನುಪಸ್ಥಿತಿಯ ನಡುವೆಯೂ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಾಣಿಸಿಕೊಂಡಿದ್ದ ಬುಮ್ರಾ ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಅವರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ನಡುವೆ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಒಂದು ವೇಳೆ ಬುಮ್ರಾ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಸಿದರೆ ಅವರು ಮತ್ತೆ ನೋವಿನ ಸಮಸ್ಯೆಗೆ ಸಿಲುಕಬಹುದು. ಅದು ಅವರ ಟೆಸ್ಟ್ ವೃತ್ತಿಜೀವನದ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು ಇಂಗ್ಲೆಂಡ್ ವಿರುದ್ಧದ ಸರಣಿಯ ನಡುವೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತಿದೆ.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದಿಂದ ಹೊರಗುಳಿದರೆ ಹರ್ಷಿತ್ ರಾಣಾ ಅಥವಾ ಅರ್ಷದೀಪ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಭಾರತ ತಂಡದಲ್ಲಿರುವುದು ಆರು ವೇಗಿಗಳು ಮಾತ್ರ. ಅವರೆಂದರೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.
ಇವರಲ್ಲಿ ಬುಮ್ರಾ, ಸಿರಾಜ್ ಹಾಗೂ ಪ್ರಸಿದ್ಧ್ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಬುಮ್ರಾ ಹೊರುಗಳಿದರೆ, ಉಳಿದ ಮೂವರಿಂದ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅದರಂತೆ ಅರ್ಷದೀಪ್ ಸಿಂಗ್ ಅಥವಾ ಹರ್ಷಿತ್ ರಾಣಾಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕೀರನ್ ಪೊಲಾರ್ಡ್