ಲಾರ್ಡ್ಸ್‌ನಲ್ಲಿ ಕೊನೆಯ ಪಂದ್ಯ; ವಿದಾಯದ ಸನಿಹದಲ್ಲಿ ಟೀಂ ಇಂಡಿಯಾದ ಲೆಜೆಂಡರಿ ಬೌಲರ್..!
Jhulan Goswami: ಬಿಸಿಸಿಐ ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದ್ದು, ಜೂಲನ್ ಗೋಸ್ವಾಮಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಭಾರತದ ಪ್ರಸಿದ್ಧ ಮಹಿಳಾ ಬೌಲರ್ ಜೂಲನ್ ಗೋಸ್ವಾಮಿ (Jhulan Goswami) ಅವರು ಸುಮಾರು ಎರಡು ದಶಕಗಳ ತನ್ನ ವೃತ್ತಿಜೀವನಕ್ಕೆ ಶೀಘ್ರದಲ್ಲೇ ಸಂಪೂರ್ಣ ವಿರಾಮ ಹಾಕಲಿದ್ದಾರೆ. ವರ್ಷಗಳ ಕಾಲ ಮಹಿಳಾ ಕ್ರಿಕೆಟ್‌ನಲ್ಲಿ ಜೂಲನ್ ಪ್ರಮುಖ ಪಾತ್ರ ವಹಿಸಿದ್ದು, ಅವರು ಪ್ರಸ್ತುತ ದೇಶದ ಅತ್ಯಂತ ಯಶಸ್ವಿ ಮತ್ತು ಅನುಭವಿ ಆಟಗಾರರಾಗಿದ್ದಾರೆ. ಮಿಥಾಲಿ ರಾಜ್ ನಿವೃತ್ತಿಯ ನಂತರ, ಅವರು ಶೀಘ್ರದಲ್ಲೇ ನಿವೃತ್ತಿ ಹೊಂದಲಿದ್ದು, ಇದಕ್ಕಾಗಿ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಲಾರ್ಡ್ಸ್‌ನಲ್ಲಿ ಕೊನೆಯ ಪಂದ್ಯ
ಬಿಸಿಸಿಐ ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದ್ದು, ಜೂಲನ್ ಗೋಸ್ವಾಮಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಜೂಲನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇಂಗ್ಲೆಂಡ್ ಪ್ರವಾಸದಲ್ಲಿ ಜೂಲನ್ ತನ್ನ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಎಂದು ವರದಿಯಾಗಿದೆ. ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಸೆಪ್ಟೆಂಬರ್ 24 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯ ಜೂಲನ್ ಅವರ ವೃತ್ತಿ ಜೀವನದ ಕೊನೆಯ ಪಂದ್ಯವೂ ಆಗಲಿದೆ ಎಂದು ಊಹಿಸಲಾಗಿದೆ.
ಜೂಲನ್ ಟಿ20ಗೆ ವಿದಾಯ ಹೇಳಿದ್ದಾರೆ
ಜೂಲನ್ ತನ್ನ ಕೊನೆಯ ODI ಪಂದ್ಯವನ್ನು ಈ ವರ್ಷದ ಮಾರ್ಚ್‌ನಲ್ಲಿ ಆಡಿದ್ದರು. ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. ಆದಾಗ್ಯೂ, ಗಾಯದ ಕಾರಣ, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಗುಂಪಿನ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಜೊತೆಗೆ 2018 ರಲ್ಲಿ ಜೂಲನ್ ತಮ್ಮ ಕೊನೆಯ T20 ಪಂದ್ಯವನ್ನು ಆಡಿದ್ದರು. ಇದರ ನಂತರ, ಈ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರು. ಬಳಿಕ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಅಕ್ಟೋಬರ್ 2021 ರಲ್ಲಿ ಆಡಿದ್ದರು. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಜೂಲನ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ IPL ಆಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಆರಂಭವಾಗಲಿದೆ ಎಂದು ಬಿಸಿಸಿಐ ಇತ್ತೀಚೆಗೆ ಹೇಳಿತ್ತು. ಜೂಲನ್ ಟಿ20ಯಿಂದ ನಿವೃತ್ತಿಯಾಗಿದ್ದರೂ ಐಪಿಎಲ್ನಲ್ಲಿ ಆಡುವ ಅವಕಾಶ ಅವರಿಗಿದೆ.
ವೃತ್ತಿಜೀವನದಲ್ಲಿ ಅನೇಕ ಯಶಸ್ಸು
ಜೂಲನ್ ಮಾರ್ಚ್ 2002 ರಲ್ಲಿ ತಮ್ಮ 19 ನೇ ವಯಸ್ಸಿನಲ್ಲಿ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು 12 ಟೆಸ್ಟ್, 68 T20 ಅಂತರಾಷ್ಟ್ರೀಯ ಮತ್ತು 201 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೂಲನ್ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೂಲನ್ ಏಕದಿನದಲ್ಲಿ ಪಂದ್ಯಗಳಲ್ಲಿ ಇದುವರೆಗೆ 252 ವಿಕೆಟ್ ಪಡೆದಿದ್ದಾರೆ. ಜೊತೆಗೆ ಆರು ಮಹಿಳಾ ODI ವಿಶ್ವಕಪ್‌ಗಳಲ್ಲಿ ಆಡಿದ ಹಿರಿಮೆಯೂ ಜೂಲನ್ ಜೊತೆಗಿದೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನೂ ಹೊಂದಿದ್ದು, ವಿಶ್ವಕಪ್‌ನ 34 ಪಂದ್ಯಗಳಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ.
Published On - 8:14 pm, Sat, 20 August 22